ಧಾರವಾಡ : ಅನ್ನದಾನಂ ಕ್ಷಣಿಕ ತೃಪ್ತಿಃ ವಿದ್ಯಾದಾನಂ ಯಾವಜ್ಜೀವಂ ಎಂಬ ಮಾತು ಸರ್ವಕಾಲಿಕವಾದದ್ದು, ಹಸಿದವರಿಗೆ ಅನ್ನ ಹಾಕಿದಾಗ ಆ ಕ್ಷಣದ ತೃಪ್ತಿ ಮಾತ್ರ ಹಸಿದವನಿಗೆ ಸಿಗುತ್ತದೆ. ಆದರೆ ವಿದ್ಯಾದಾನ ಮಾತ್ರ ವಿದ್ಯೆಯನ್ನು ಪಡೆದವನ ಜೀವನದುದ್ದಕ್ಕೂ ಅವನಿಗೆ ತೃಪ್ತಿಯನ್ನು ಕೊಡುತ್ತದೆ. ಆ ನಿಟ್ಟಿನಲ್ಲಿ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆ ವಿದ್ಯೆಯನ್ನು ನೀಡುತ್ತ ಬಂದಿದೆ ಎಂದು ಜನತಾ ಶಿಕ್ಷಣ ಸಮಿತಿಯ ವಿತ್ತಾಧಿಕಾರಿಗಳಾದ ಡಾ.ಅಜಿತಪ್ರಸಾದ ಹೇಳಿದರು.
ಇಲ್ಲಿಯ ಜನತಾ ಶಿಕ್ಷಣ ಸಮಿತಿ ಹಾಗೂ ಧಾರವಾಡ ಶಹರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಸಹಯೋಗದಲ್ಲಿ ನಡೆದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಬಹುಮಾನ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿ ವರ್ಷ ೨೫೦ ಕ್ಕೂ ಅಧಿಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಉಚಿತ ಪ್ರವೇಶದೊಂದಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಈ ರೀತಿ ಸೌಲಭ್ಯ ಪಡೆದ ಪ್ರತಿಯೊಬ್ಬ ವಿದ್ಯಾರ್ಥಿಯ ಸಾಧನೆ ಮಾಡಿ ತೋರಿಸಿದ್ದಾರೆ ಎಂದು ಹೇಳಿದರು.
ಅತಿಥಿಗಳಾಗಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಹಾಗೂ ಜೆ.ಎಸ್.ಎಸ್ ನ ಹಳೆಯ ವಿದ್ಯಾರ್ಥಿ ರವಿ ಮಾಳಗೇರ, ಈ ಸಂಸ್ಥೆಯ ಮುಖಾಂತರ ತಾನು ಬೆಳಕು ಕಂಡ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳು ಯಾವುದೇ ರೀತಿಯ ದುಶ್ಚಟಗಳಿಗೆ ಈಡಾಗದೇ ಜೀವನದಲ್ಲಿ ಅಹಂಕಾರ ಪಡದೆ ಮುನ್ನಡೆದಾಗ ಯಶಸ್ಸು ಖಂಡಿತ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮತ್ತೊಬ್ಬ ಅತಿಥಿ, ಧಾರವಾಡದ ವಾಹನಗಳ ಹಿರಿಯ ನಿರೀಕ್ಷಕ ಪ್ರಹ್ಲಾದ ದೇಸಾಯಿ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿವರ್ಷ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹ ನೀಡುತ್ತಿರುವ ಇದಾಯತ್ ರಾಯಚೂರ ಅವರ ಕಾರ್ಯ ಶ್ಲಾಘನೀಯ ಎಂದರು.
ವೇದಿಕೆಯ ಮೇಲೆ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ೫೦೦೦ ರೂಗಳಂತೆ ಒಟ್ಟು ೧೨ ಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ-ವೇತನ ನೀಡಿದ ಸಮಾಜ ಸೇವಕ ಹಿದಾಯತ್ ರಾಯಚೂರು, ಜೆ.ಎಸ್.ಎಸ್ ಐ.ಟಿ.ಐ ಮಹಾವೀರ ಉಪಾದ್ಯೆ, ಧಾರವಾಡ ಶಹರ ಅಟೋ ಚಾಲಕ / ಮಾಲೀಕರ ಸಂಘದ ಅಧ್ಯಕ್ಷ ಶಿವಾನಂದ ನಿಗದಿ, ಕಾರ್ಯಾಧ್ಯಕ್ಷ ಸುಭಾಸ ಸುಣಗಾರ, ಗುಲಾಬ್ ಕಿತ್ತೂರ್, ಕಲೀಲ್ ಶೇಖ್ ಮೊದಲಾದವರು ಉಪಸ್ಥಿತರಿದ್ದರು. ಹಿರಿಯ ಆಟೋ ಚಾಲಕ ಅಬ್ದುಲ್ ಸತ್ತಾರ್ ಗೋಲಂದಾಜ ಅವರನ್ನು ಸನ್ಮಾನಿಸಲಾಯಿತು ಹಾಗೂ ವೇದಿಕೆ ಮೇಲಿನ ಗಣ್ಯರನ್ನು ಜನತಾ ಶಿಕ್ಷಣ ಸಮಿತಿಯ ಪರವಾಗಿ ಸನ್ಮಾನಿಸಲಾಯಿತು.
ಡಾ. ಜಿನದತ್ತ ಹಡಗಲಿ ನಿರೂಪಿಸಿದರು, ಜಿನೇಂದ್ರ ಕುಂದಗೋಳ ವಂದಿಸಿದರು. ದೀಪಾ ಕುಲಕರ್ಣಿ ಪ್ರಾರ್ಥಿಸಿದರು. ಜೆ.ಎಸ್.ಎಸ್ ವಿವಿಧ ಸಂಸ್ಥೆಗಳ ಮುಖ್ಯಸ್ಥರಾದ ಎಸ್. ವಿ. ಭಟ್, ವೈ.ಎಸ್ ರಾಯಬಾಗಿ, ರಜನಿ ದಾಸ್, ತ್ರಿವೇಣಿ, ಉಷಾ ಸಂತೋಷ ಹಾಗೂ ಇತರರು ಉಪಸ್ಥಿತರಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ