ರಾಷ್ಟ್ರೀಯ ಪುಸ್ತಕ ಸಪ್ತಾಹದಲ್ಲಿ ಒಂದು ಅವಲೋಕನ..: ಭಾರತದಲ್ಲಿ ೧೭ ಸಾವಿರಕ್ಕೂ ಹೆಚ್ಚು ಪ್ರಕಾಶಕರು..೧೪ ಸಾವಿರ ಕೋಟಿ ರೂ.ಮೌಲ್ಯದ ವಹಿವಾಟು

..ಪ್ರತಿವರ್ಷ ನವೆಂಬರ್‌ ೧೪ ರಿಂದ ೨೦ರ ವರೆಗೆ ರಾಷ್ಟ್ರೀಯ ಪುಸ್ತಕ ಸಪ್ತಾಹವನ್ನು ದೇಶದಲ್ಲೆಡೆ ಆಚರಣೆ ಮಾಡಲಾಗುತ್ತದೆ. ಪುಸ್ತಕಗಳ ಕಡೆಗೆ ಜನಸಾಮಾನ್ಯರ ಗಮನ ಸೆಳೆಯುವುದು, ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯ ಪರಿಚಯವನ್ನು ಪುಸ್ತಕಗಳ ಮೂಲಕ ಜನರಲ್ಲಿ ಅರಿವು ಮೂಡಿಸುವುದು, ಮಕ್ಕಳ ಸಾಹಿತ್ಯ ಪ್ರಕಟಣೆ ವಿದ್ಯಾರ್ಥಿಗಳಲ್ಲಿ ಶಿಕ್ಷಕ ಸಮುದಾಯದಲ್ಲಿ ಮತ್ತು ಸಮಾಜದ ಎಲ್ಲ ವರ್ಗದ ಜನರಲ್ಲಿ ವಾಚನಾಭಿರುಚಿಯನ್ನು ಬೆಳೆಸುವುದೇ ಈ ಪುಸ್ತಕ ಸಪ್ತಾಹದ ಪ್ರ‍್ರಮುಖ ಉದ್ದೇಶವಾಗಿದೆ
ನವದೆಹಲಿಯಲ್ಲಿ ಕೇಂದ್ರದ ಕಚೇರಿ ಹೊಂದಿರುವ ನ್ಯಾಶನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಈ ಸಪ್ತಾಹವನ್ನು ಪ್ರತಿ ವರ್ಷವೂ ಪ್ರಾಯೋಜಿಸುತ್ತಿದೆ. ದೇಶದ ಪ್ರಪ್ರಥಮ ಪ್ರಧಾನಿಗಳಾಗಿದ್ದ ಲೇಖಕ ಪಂಡಿತ ಜವಾಹರಲಾಲ್ ನೆಹರೂ ಅವರ ಕನಸಿನ ಕೂಸಾದ ನ್ಯಾಶನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ, ಸಂಸ್ಥೆಯೂ ೧೯೫೭ ರಲ್ಲಿ ಭಾರತ ಸರಕಾರದ ಶಿಕ್ಷಣ ಇಲಾಖೆಯ ಅಧೀನದಲ್ಲಿ ಸ್ವಯಂ ಆಡಳಿತದಿಂದ ಪ್ರಾರಂಭಗೊಂಡು ಸದ್ಯ ೬೪ ವಸಂತಗಳನ್ನು ಪೂರೈಸಿ ವಜ್ರ ಮಹೋತ್ಸವದತ್ತ ದಾಪುಗಾಲಿಟ್ಟಿದೆ.
ಖುದ್ದು ಸಾಹಿತ್ಯ ಪ್ರೇಮಿಗಳೂ ಹಾಗೂ ಬರಹಗಾರರೂ ಆಗಿದ್ದ ನೆಹರು ಅವರು ನ್ಯಾಶನಲ್ ಬುಕ್ ಟ್ರಸ್ಟ್ ಸ್ಥಾಪನೆಗೆ ಅವಶ್ಯಕವಿದ್ದ ರೂಪರೇಷೆಗಳನ್ನು ಹಾಕಿಕೊಟ್ಟು ಸಂಸ್ಥೆಗೊಂದು ಭದ್ರಬುನಾದಿ ಹಾಕಿಕೊಟ್ಟ ಜನತೆಯಲ್ಲಿ ಓದುವ ಅಭಿರುಚಿಯನ್ನು ಬೆಳೆಸುವಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅಂತೆಯೇ ಈ ದಿಸೆಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಸ್ಥೆಯು ೧೯೮೨ ರಲ್ಲಿ ವಿಧ್ಯುಕ್ತವಾಗಿ ತನ್ನ ರಜಚ ಮಹೋತ್ಸವ ಆಚರಿಸಿಕೊಂಡಿತು.
ವ್ಯಕ್ತಿಯೊಬ್ಬ ಪ್ರತಿ ವರ್ಷದಲ್ಲಿ ಕನಿಷ್ಠ ೨ ಸಾವಿರ ಪುಟಗಳಷ್ಟಾದರೂ ಓದಬೇಕು ಅಂದಾಗ ಮಾತ್ರ ಜಗತ್ತಿನ ಆಗು-ಹೋಗುಗಳಿಗೆ ಸ್ಪಂದಿಸುತ್ತ ಪ್ರಜಾಪ್ರಭುತ್ವದ ಪರಿಪೂರ್ಣ ಪ್ರಜೆಯಾಗಿ ಗುರುತಿಸಿಕೊಳ್ಳಲು ಸಾಧ್ಯ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ವಿಪರ್ಯಾಸವೆಂದರೆ ವಿಶ್ವದ ಅತಿದೊಡ್ಡ ಗಣರಾಜ್ಯವಾಗಿರುವ ಭಾರತದಲ್ಲಿ ಇದು ಎಷ್ಟರಮಟ್ಟಿಗೆ ಸಾಕಾರಗೊಂಡಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಭಾರತದಲ್ಲಿ ವ್ಯಕ್ತಿಯೊಬ್ಬ ಪ್ರತಿವರ್ಷ ಓದುವುದು ಸರಾಸರಿ ಅತ್ಯಂತ ಕಡಿಮೆ ಮಟ್ಟದ್ದಾಗಿದೆ. ಇದರ ಅರ್ಥ ಪುಸ್ತಕಗಳ ಕೊರತೆಯೇ ಎಂಬ ಅನುಮಾನ ಬರಬಹುದು ಆದ ಭಾರತ ಸ್ವಾತಂತ್ರ್ಯಗೊಂಡ ನಂತರ ದೇಶದಲ್ಲಿ ಪುಸ್ತಕಗಳ ಪ್ರಕಟಣೆ ಪ್ರಗತಿಯಲ್ಲಿದೆ.
ಕಳೆದ ೩೫ ರಿಂದ ೪೦ ವರ್ಷಗಳಳ್ಲಿ ಭಾರತವು ಪುಸ್ತಕ ಪ್ರಕಟಣೆಯಲ್ಲಿ ದಾಪುಗಾಲು ಹಾಕುತ್ತಿದ್ದು ಇದೀಗ ಪುಸ್ತಕ ಪ್ರಕಟಣಾ ಕ್ಷೇತ್ರದ ವಿಶ್ವ ಮಾರುಕಟ್ಟೆಯಲ್ಲಿ ಭಾರತ ಒಂದು ಪ್ರಮುಖ ರಾಷ್ಟ್ರವಾಗಿ ಪರಿಣಮಿಸಿರುವ ಜೊತೆಗೆ ಜಗತ್ತಿನ ಪ್ರಮುಖ ರಾಷ್ಟ್ರಗಳಿಗೆ ಪುಸ್ತಕ ರಫ್ತು ಮಾಡುವುದರಲ್ಲಿ ಮುಂದಿರುವುದು ನಿಜಕ್ಕೂ ಪ್ರಶಂಸನೀಯ ಸಂಗತಿಯಾಗಿದೆ.
ಸದ್ಯ ಭಾರತದಲ್ಲಿ ಅಂದಾಜು ೧೭ ಸಾವಿರಕ್ಕೂ ಹೆಚ್ಚು ಪ್ರಕಾಶಕರು ಪುಸ್ತಕ ಪ್ರಕಟಿಸುತ್ತಿದ್ದು ಸುಮಾರು ೨೫ ಭಾಷೆಗಳಲ್ಲಿ ೭೫ ಸಾವಿರಕ್ಕೂ ಅಧಿಕ ಸಂಖ್ಯೆಯ ಶೀರ್ಷಿಕೆಯ ಪುಸ್ತಕಗಳು ಮುದ್ರಣಗೊಂಡು ಓದಲು ಸಿದ್ಧಗೊಳ್ಳುತ್ತಿವೆ. ಒಂದು ಅಂದಾಜಿನ ಪ್ರಕಾರ ಪ್ರತಿ ಆರ್ಥಿಕ ವರ್ಷದಲ್ಲಿ ಸುಮಾರು ೧೪ ಸಾವಿರ ಕೋಟಿ ರೂಪಾಯಿಗಳ ಮೌಲ್ಯದ ವಹಿವಾಟು ಪುಸ್ತಕ ಕ್ಷೇತ್ರದಲ್ಲಾಗುತ್ತಿರುವುದು ಅಚ್ಚರಿಯ ವಿಷಯವಾಗಿದೆ.
ಓದುವಿಕೆ ಎಂದರೆ ಕೇವಲ ಪರೀಕ್ಷೆಗಾಗಿ ಮತ್ತು ನೌಕರಿಗಾಗಿ ಓದುವ ಪಠ್ಯ ಪುಸ್ತಕಗಳೆಂದು ಇಂದಿನ ಯುವಸಮೂಹದ ನಂಬಿಕೆಯಾದ ಕಾರಣ ಕೇವಲ ಪರೀಕ್ಷೆಯನ್ನು ತೇರ್ಗಡೆ ಹೊಂದಲು ಮಾತ್ರ ಪುಸ್ತಕಗಳ ಓದುವಿಕೆ ಎಂದು ನಂಬಿದ್ದಾರೆ. ಹೀಗಾಗಿ ನಿರಂತರ ಕಲಿಕೆ ಎನ್ನುವುದು ಕೇವಲ ಒಂದು ಬಾಯಿಮಾತಿನ ಶಬ್ದವಾಗಿ ಮಾರ್ಡಟ್ಟಿದೆ. ಶಿಕ್ಷಕರು ಹಾಗೂ ಸಂಶೋಧಕರರಲ್ಲಿಯೂ ಕೂಡ ನಿರಂತರ ಓದುವಿಕೆ, ಸಂಶೋಧನಾತ್ಮಕತೆ ಹಾಗೂ ಪರಾಮರ್ಶನ ಗ್ರಂಥಗಳ ವಾಚನದ ಕೊರತೆ ಇತ್ತೀಚೆಗಂತೂ ಅತ್ಯಧಿಕವಾಗಿ ಗೋಚರಿಸುತ್ತಿದೆ. ಅದಕ್ಕಾಗಿ ಪುಸ್ತಕಗಳ ಸದ್ಭಳಕೆಗಾಗಿ ಸಂಶೋಧನಾಶೀಲ ಶಿಕ್ಷಕರಿಗೆ ಇಂದು ಪ್ರಾಮುಖ್ಯತೆ ಇದೆ.
ಟಿ.ವಿ., ಗಣಕಯಂತ್ರ, ಅಂತರ್ಜಾಲ ಹಾಗೂ ಮಾಹಿತಿ ತಂತ್ರಜ್ಞಾನ ಇಂದು ಪುಸ್ತಕಗಳ ಮೇಲೆ ಸವಾರಿ ಮಾಡುತ್ತಲಿವೆ. ಕಂಪ್ಯೂಟರ್‌ ಮೌಸನ್ನು ಅದುಮಿದರೆ ಇಂದು ವಿಶ್ವದೆಲ್ಲಡೆಯ ಮಾಹಿತಿ ನಮ್ಮೆದುರು ಲಭಿಸುವ ಸೌಲಭ್ಯಗಳಿರುವಾಗಿ ಪುಸ್ತಕಗಳೇಕೆ ಎಂಬ ಪ್ರಶ್ನೆ ನಮ್ಮೆಲ್ಲರಲ್ಲಿದ್ದರೂ ಕೂಡ ಅವುಗಳ ಸ್ವರೂಪ, ವ್ಯಾಪ್ತಿ ಭಿನ್ನವಾಗಿದೆ. ಆದರೆ ಪುಸ್ತಕಗಳು ಹಾಗಲ್ಲ, ಯಾವುದೇ ಸ್ಥಳ, ಸಮಯ, ಎಲ್ಲೆಂದರಲ್ಲ ಓದಿ ಜ್ಞಾನ ಪಡೆಯುವ ಅವಕಾಶ ನೀಡುವ ಜ್ಞಾನದೀಪಗಳಾಗಿವೆ. ಟಿ.ವಿ. ಮತ್ತು ಅಂತರ್ಜಾಲಗಳು ಮನುಷ್ಯನಿಗೆ ಸಂತೋಷ ಹೆಚ್ದಿಸಬಲ್ಲವು. ಆದರೆ ಪುಸ್ತಕಗಳು ಓದುಗನೊಂದಿಗೆ ಸ್ಪಂದಿಸಿ, ಸಂತೃಪ್ತಿಯು ಭಾವನೆ ನೀಡುತ್ತವೆ. ಅಂತೆಯೇ ಗ್ರಂಥಗಳಿಗೆ ಸಾವಿಲ್ಲ ಎಂಬುದು ಸರ್ವಕಾಲಿಕ ಸತ್ಯವಾಗಿ ಇಂದಿನ ಡಿಜಿಟಲ್ ಯುಗದಲ್ಲಿಯೂ ಪರಿಣಮಿಸಿವೆ.
ರಾಷ್ಟ್ರೀಯ ಪುಸ್ತಕ ಸಪ್ತಾಹವು ಕೇವಲ ೭ ದಿನಗಳಿಗೆ ಸೀಮಿತವಾಗಿದ್ದರೂ ಸಹ ವರ್ಷವಿಡೀ ಜನರು ಓದುವ ಹವ್ಯಾಸ ಹಾಗೂ ಪುಸ್ತಕ ಸಂಸ್ಕೃತಿಯನ್ನು ಬೆಳೆಸಿಕೊಳ್ಳುವ ಪ್ರೇರಣೆ ಇದರಲ್ಲಿದೆ. ದೇಶದ ಜವಾಬ್ದಾರಿಯುತ ನಾಗರಿಕನಾಗಲು ನಿರಂತರ ಓದು ಅವಶ್ಯಕವಿದೆ. ನಿಜವಾದ ಓದು ಮನುಷ್ಯನನ್ನು ಪುಟಕ್ಕಿಟ್ಟ ಚಿನ್ನದಂತೆ ಮಾಡುತ್ತದೆ. ಮತ್ತು ಅದರ ಬೆಳಕು ಪ್ರಜ್ವಲಿಸುತ್ತಿರುವತ್ತದೆ. ಏಕೆಂದರೆ ಓದು ಮನುಷ್ಯನ್ನನು ಪರಿ ಪೂರ್ಣತೆಯತ್ತ ಕೊಂಡೊಯ್ಯುವ ಶಕ್ತಿವಾಹಕವಾಗಿದ್ದು, ಬಾಲ್ಯದಲ್ಲಿಯೇ ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸದಲ್ಲಿ ತೊಡಗುವಂತೆ ಪ್ರೋತ್ಸಾಹಿಸುವ ಮೂಲಕ ಉತ್ತಮ ಸಮಾಜವನ್ನು ಕಟ್ಟಬಹುದಾಗಿದೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

-ಬಿ.ಎಸ್. ಮಾಳವಾಡ ನಿವೃತ್ತ ಗ್ರಂಥಪಾಲಕರು

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement