ವಿಧಾನ ಪರಿಷತ್‌ ಚುನಾವಣೆ : ಸಹೋದರನಿಗೆ ಬಿಜೆಪಿ ಟಿಕೆಟ್‌ ನೀಡಲು ಶಾಸಕ ಬಾಲಚಂದ್ರ ಜಾರಕಿಹೊಳಿ ಒತ್ತಾಯ

ಗೋಕಾಕ : ಡಿಸೆಂಬರಿನಲ್ಲಿ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಅವರನ್ನು ಎರಡನೇ ಅಭ್ಯರ್ಥಿಯನ್ನಾಗಿ ಮಾಡಿ ಅವರಿಗೆ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಡುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪಕ್ಷದ ಮುಖಂಡರಲ್ಲಿ ಮನವಿ ಮಾಡಿದ್ದಾರೆ.
ಶನಿವಾರ ನಗರದ ಹೊರವಲಯದಲ್ಲಿರುವ ಗೋಕಾಕ ಸಪ್ಲಾರ‍್ಸ್ ಸಭಾಭವನದಲ್ಲಿ ಅರಭಾವಿ ಮಂಡಲ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ಲಖನ್ ಜಾರಕಿಹೊಳಿ ಅವರಿಗೆ ಸ್ಪರ್ಧಿಸಲು ಪಕ್ಷವು ಅವಕಾಶ ಕಲ್ಪಿಸಿಕೊಟ್ಟಲ್ಲಿ ಬಿಜೆಪಿಯಿಂದ ಇಬ್ಬರೂ ಅಭ್ಯರ್ಥಿಗಳು ಪರಿಷತ್‌ಗೆ ಆಯ್ಕೆಯಾಗಲಿದ್ದಾರೆ ಎಂದು ಹೇಳಿದರು.
೨೦೧೯ ರಲ್ಲಿ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೂ ನಂತರ ಬದಲಾದ ಸ್ಥಿತಿಯಲ್ಲಿ ಅವರು ಬಿಜೆಪಿಯೊಂದಿಗೆ ಗುರುತಿಸಿಕೊಂಡು ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಪರ ಪ್ರಚಾರ ಕೈಗೊಂಡು ಅಂಗಡಿಯವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬಿಜೆಪಿಯ ಮೊದಲನೇ ಅಭ್ಯರ್ಥಿಯಾಗಿ ಮಹಾಂತೇಶ ಕವಟಗಿಮಠ ಸ್ಪರ್ಧಿಸುವುದು ಬಹುತೇಕ ಖಚಿತವಾದಂತಾಗಿದೆ. ಲಖನ್ ಅವರನ್ನು ಎರಡನೇ ಅಭ್ಯರ್ಥಿಯನ್ನಾಗಿ ಪಕ್ಷವು ಘೋಷಿಸಿದರೆ ನಿಶ್ಚಿತವಾಗಿಯೂ ಎರಡೂ ಸ್ಥಾನಗಳು ಬಿಜೆಪಿ ಮಡಿಲಿಗೆ ಬೀಳಲಿವೆ. ಇದಕ್ಕೆ ಪಕ್ಷದ ಮುಖಂಡರು ಅವಕಾಶ ಮಾಡಿ ಕೊಡಬೇಕು. ಅಲ್ಲದೇ ಲಖನ್ ಅವರುಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದನ್ನೆಲ್ಲ ಗಮನಿಸಿ ಲಖನ್ ಅವರನ್ನು ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿಯನ್ನಾಗಿ ಘೋಷಿಸಲು ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿಕೊಂಡರು.
ಬಿಜೆಪಿ ದೇಶದಲ್ಲಿಯೇ ಅತೀ ದೊಡ್ಡ ಹಾಗೂ ಶಕ್ತಿಶಾಲಿ ಪಕ್ಷವಾಗಿದೆ. ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ ತತ್ವವನ್ನು ಆಧಾರವಾಗಿಟ್ಟುಕೊಂಡು ಸರ್ಕಾರ ಕೆಲಸ ನಿರ್ವಹಿಸುತ್ತಿದೆ. ಶಿಕ್ಷಣ, ಸಂಘಟನೆ ಹಾಗೂ ಹೋರಾಟಗಳನ್ನು ಮೈಗೂಡಿಸಿಕೊಂಡು ಇಡೀ ದೇಶದ ಸಮಗ್ರ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಎಲ್ಲ ವರ್ಗಗಳ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ಡಿಸೆಂಬರ್ ೧೦ ರಂದು ನಡೆಯುವ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮಾತನಾಡಿ, ಈ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಬೇಕು. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈಗಳನ್ನು ಬಲಪಡಿಸಲು ಬಿಜೆಪಿಗೆ ಮತ ಚಲಾಯಿಸಬೇಕು. ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ನಿಗಮ ಮಂಡಳಿಗಳಿಗೆ ನೇಮಿಸುವಂತೆ ಅವರು ಪಕ್ಷದ ಮುಖಂಡರಲ್ಲಿ ಕೋರಿಕೊಂಡರು.
ಅಧ್ಯಕ್ಷತೆಯನ್ನು ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ ವಹಿಸಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪ್ರೇಮಾ ಬಂಡಾರಿ, ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಈರಣ್ಣ ಅಂಗಡಿ, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಜಯಪ್ರಕಾಶ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ ಮೊದಲಾದವರಿದ್ದರು.

ಪ್ರಮುಖ ಸುದ್ದಿ :-   ಶಿವಮೊಗ್ಗ : ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರ ಬರ್ಬರ ಹತ್ಯೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement