ದತ್ತಪೀಠಕ್ಕೆ ತೆರಳುತ್ತಿದ್ದ ಬಸ್ ಮೇಲೆ ಕಲ್ಲುತೂರಾಟ

ಕೋಲಾರ: ದತ್ತಪೀಠಕ್ಕೆ ತೆರಳುತ್ತಿದ್ದ ಬಸ್ ಮೇಲೆ ಅನ್ಯ ಕೋಮಿನ ಗುಂಪೊಂದು ಕಲ್ಲು ತೂರಾಟ ನಡೆಸಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ನಗರದ ಕ್ಲಾಕ್ ಟವರ್ ಬಳಿ ಕಳೆದ ರಾತ್ರಿ 11.30ರ ಸುಮಾರಿಗೆ ಈ ಘಟನೆ ನಡೆದಿದ್ದು, ನಗರದ ಕ್ಲಾಕ್ ಟವರ್ ವೃತ್ತದಲ್ಲಿ ಕ್ಷುಲ್ಲಕ ಕಾರಣಕ್ಕೆ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಗಲಾಟೆ ನಡೆದ ಸಮಯದಲ್ಲಿ ಅದೇ ಮಾರ್ಗವಾಗಿ ದತ್ತಪೀಠಕ್ಕೆ ತೆರಳುತ್ತಿದ್ದ ದತ್ತ ಮೇಲಾಧಾರಿಗಳ ಬಸ್ ಮೇಲೆ ಗುಂಪಿನಲ್ಲಿದ್ದ ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ವರದಿಯಾಗಿದೆ.
ಕ್ಲಾಕ್ ಟವರ್ ನಲ್ಲಿ ಈ ಗಲಾಟೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಸ್‍ನಲ್ಲಿದ್ದವರು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ಚಿಕ್ಕಮಗಳೂರಿನ ದತ್ತಪೀಠಕ್ಕೆ ಹೊರಟಿದ್ದರು ಎನ್ನಲಾಗಿದೆ. ಎರಡು ಗುಂಪುಗಳ ಪರಸ್ಪರ ಗಲಾಟೆ ಸಂದರ್ಭದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತರಿದ್ದ ಬಸ್ ಮೇಲೆಯೂ ಕಲ್ಲು ತೂರಲಾಗಿದೆ.
ಬಸ್‍ನಲ್ಲಿದ್ದ ಮೂವರು ಶ್ರೀರಾಮ ಸೇನೆ ಕಾರ್ಯಕರ್ತರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ವಿಷಯ ತಿಳಿದ ಕೋಲಾರ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿದರಾದರೂ ಶ್ರೀರಾಮ ಸೇನೆ ಕಾರ್ಯಕರ್ತರು ಹಾಗೂ ದತ್ತಮಾಲಾಧಾರಿಗಳು ಕೋಲಾರ ನಗರ ಠಾಣೆ ಎದುರು ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿದರು.
ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ. ನಗರದ ಕ್ಲಾಕ್ ಟವರ್‍ನಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ. ಕೋಲಾರ ನಗರ ಪೊಲೀಸರು ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಸ್ಥಳಕ್ಕೆ ಎಸ್‍ಪಿ ಡಿ.ಕಿಶೋರ್ ಬಾಬು ಭೇಟಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement