ದಕ್ಷಿಣ ಭಾರತದ ಕೊಡುಗೆಯಿಲ್ಲದೆ ಭಾರತದ ಪ್ರಗತಿ ಯೋಚಿಸಲೂ ಅಸಾಧ್ಯ : ಅಮಿತ್ ಶಾ

ತಿರುಪತಿ: ದಕ್ಷಿಣ ಭಾರತದ ರಾಜ್ಯಗಳ ಕೊಡುಗೆ ನಿರ್ಲಕ್ಷಿಸಿ ಭಾರತದ ಪ್ರಗತಿಯನ್ನು ಆಲೋಚಿಸಲು ಸಾಧ್ಯವೇ ಇಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ದಕ್ಷಿಣ ವಲಯ ಮಂಡಳಿಯ 29ನೇ ಸಭೆಯಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದ ರಾಜ್ಯಗಳ ಪ್ರಾಚೀನ ಸಂಸ್ಕೃತಿ, ಪರಂಪರೆ ಮತ್ತು ಭಾಷೆಗಳು ಭಾರತದ ಸಂಸ್ಕೃತಿ ಮತ್ತು ಇತಿಹಾಸದ ಮೌಲ್ಯವನ್ನು ಹೆಚ್ಚಿಸಿವೆ ಎಂದರು. ಸಭೆಯಲ್ಲಿ ಆಂಧ್ರ ಪ್ರದೇಶ, ತಮಿಳುನಾಡು, ಕರ್ನಾಟಕ, ಕೇರಳ ಮತ್ತು ತೆಲಂಗಾಣ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳು ದಕ್ಷಿಣ ವಲಯ ಮಂಡಳಿಯ ಸದಸ್ಯ ರಾಜ್ಯಗಳಾಗಿವೆ. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕೊವಿಡ್-19 ಲಸಿಕಾಕರಣದ ವೇಗ ಹೆಚ್ಚಿಸಬೇಕು, ಮುಖ್ಯಮಂತ್ರಿಗಳೇ ಸ್ವತಃ ಈ ವಿಚಾರದ ನಿಗಾ ವಹಿಸಬೇಕು ಎಂದು ಶಾ ವಿವಿಧ ರಾಜ್ಯಗಳಿಗೆ ಸೂಚಿಸಿದರು. ಮಾದಕದ್ರವ್ಯಗಳ ಜಾಲವನ್ನು ಹತ್ತಿಕ್ಕಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಭಾರತೀಯ ದಂಡಸಂಹಿತೆ ಮತ್ತು ಅಪರಾಧ ಪ್ರಕ್ರಿಯಾ ನಿಯಮಗಳಲ್ಲಿ ಬದಲಾವಣೆಗಳನ್ನು ಸೂಚಿಸುವಂತಿದ್ದರೆ ಸಲಹೆ ನೀಡಿ ಎಂದು ಅಮಿತ್ ಶಾ ಹೇಳಿದರು.
ಸ್ಥಳೀಯ ಭಾಷೆಗಳಲ್ಲಿ ಪಾಠ ಮಾಡುವ ಒಂದಾದರೂ ವಿಧಿವಿಜ್ಞಾನ (ಫೊರೆನ್ಸಿಕ್) ಕಾಲೇಜು ಆರಂಭಿಸಬೇಕು. ಆಗ ಉತ್ತಮ ತನಿಖೆ ನಿರ್ವಹಿಸಲು ಸೂಕ್ತರೀತಿಯಲ್ಲಿ ಸಜ್ಜುಗೊಂಡ ಮಾನವ ಸಂಪನ್ಮೂಲ ಸಿದ್ಧವಾಗುತ್ತದೆ ಎಂದ ಅವರು ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಪೊಲೀಸ್ ಇಲಾಖೆಯಲ್ಲಿ ವಿಚಾರಣೆಗಾಗಿ ನಿರ್ದೇಶನಾಲಯ ಸ್ಥಾಪಿಸಬೇಕು. ಉತ್ತಮ ತನಿಖೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಹೇಳಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸ್ಥಳೀಯ ಸಂಸ್ಕೃತಿ ಮತ್ತು ಭಾಷೆಗಳನ್ನು ಗೌರವಿಸುತ್ತದೆ. ಈ ಸಭೆಯಲ್ಲಿಯೂ ವಿವಿಧ ರಾಜ್ಯಗಳ ಭಾಷೆಗೆ ಅನುವಾದದ ಸೌಕರ್ಯ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ರಾಜ್ಯಗಳ ಪ್ರತಿನಿಧಿಗಳು ಸ್ಥಳೀಯ ಭಾಷೆಗಳಲ್ಲಿಯೇ ಮಾತನಾಡಿದರೆ ನನಗೆ ಹೆಚ್ಚು ಸಂತೋಷವಾಗುತ್ತದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ವಿಚಾರ ವಿನಿಮಯ ನಡೆಸಲು ವಲಯ ಮಂಡಳಿ ಸಭೆಗಳು ಅತ್ಯುತ್ತಮ ವೇದಿಕೆಗಳಾಗಿವೆ. ಭಾನುವಾರದ ಸಭೆಯಲ್ಲಿ ಚರ್ಚೆಗೆ ಬಂದ 51 ವಿಷಯಗಳ ಪೈಕಿ 30 ಅಂಶಗಳನ್ನು ಪರಿಹರಿಸಲಾಗಿದೆ. ವಲಯ ಮಂಡಳಿ ಸಭೆಗಳು ಸಲಹಾತ್ಮಕವಾಗಿದ್ದರೂ ಹಲವು ಪ್ರಮುಖ ವಿಚಾರಗಳನ್ನು ಪರಿಹರಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ ಎಂದು ಅಮಿತ್ ಶಾ ನುಡಿದರು.
ವಲಯ ಮಂಡಳಿ ಸಭೆಗಳಲ್ಲಿ ರಾಜ್ಯಗಳ ಗಡಿಗಳಿಗೆ ಸಂಬಂಧಿಸಿದ ವಿವಾದಗಳು, ಭದ್ರತೆ, ಮೂಲಸೌಕರ್ಯ ಸಮಸ್ಯೆಗಳು, ಪರಿಸರ, ವಸತಿ, ಶಿಕ್ಷಣ, ಆಹಾರ, ಪ್ರವಾಸೋದ್ಯಮ ಮತ್ತು ಸಾರಿಗೆ ಕುರಿತು ಚರ್ಚೆಗೆ ಅವಕಾಶವಿದೆ ಎಂದರು.

ಪ್ರಮುಖ ಸುದ್ದಿ :-   ಮೈ ಜುಂ ಎನ್ನುವ ವೀಡಿಯೊ : ಒಮ್ಮೆಗೇ ಧುಮ್ಮಿಕ್ಕಿದ ನೀರಿನ ಝರಿಯಲ್ಲಿ ಜಾರಿಬಿದ್ದ 6 ಮಹಿಳೆಯರು ಸ್ವಲ್ಪದರಲ್ಲೇ ಪಾರು...!

ಕಳೆದ ಏಳು ವರ್ಷಗಳಲ್ಲಿ 18 ವಲಯ ಕೌನ್ಸಿಲ್ ಸಭೆಗಳನ್ನು ನಡೆಸಲಾಗಿದ್ದು, ಈ ಹಿಂದೆ ಕೆಲವೇ ಕೆಲವು ಸಭೆಗಳು ನಡೆದಿವೆ ಎಂದು ಸಚಿವರು ಮಾಹಿತಿ ನೀಡಿದರು. “ಈಗ ವಿವಿಧ ವಲಯ ಮಂಡಳಿಗಳ ಸಭೆಗಳು ನಿಯಮಿತವಾಗಿ ಕರೆಯಲ್ಪಡುತ್ತವೆ ಮತ್ತು ಇದು ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಸಹಕಾರದಿಂದ ಮಾತ್ರ ನಡೆಯಲು ಸಾಧಯ ಎಂದು ಶಾ ಅವರನ್ನು ಉಲ್ಲೇಖಿಸಿ ಗೃಹ ಸಚಿವಾಲಯ ಹೇಳಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement