ಬೆಂಗಳೂರು: ಇಂದು ಪುನೀತ್‌ ನಮನ ಕಾರ್ಯಕ್ರಮ, ಚಿತ್ರರಂಗದ ಪ್ರಮುಖರು ಭಾಗಿ

ಬೆಂಗಳೂರು: ನಟ ಪುನೀತ್ ರಾಜ್​ಕುಮಾರ್ ಅವರಿಗೆ ಚಿತ್ರರಂಗದ ಪರವಾಗಿ ನಮನ ಸಲ್ಲಿಸುವ ಉದ್ದೇಶದಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಂದು (ನವೆಂಬರ್ 16) ‘ಪುನೀತ ನಮನ’ ಕಾರ್ಯಕ್ರಮ ಹಮ್ಮಿಕೊಂಡಿದೆ.ಮಧ್ಯಾಹ್ನ 3 ಗಂಟೆಗೆ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಕಾರ್ಯಕ್ರಮ ಆರಂಭವಾಗಲಿದೆ.
ಕನ್ನಡ ಚಿತ್ರರಂಗದ ಎಲ್ಲ ಗಣ್ಯರು ಭಾಗವಹಿಸಬೇಕು ಎಂಬ ಉದ್ದೇಶದಿಂದ ಚಿತ್ರ ಪ್ರದರ್ಶನ ಹೊರತುಪಡಿಸಿ, ಇಂದು, ಚಿತ್ರೋದ್ಯಮದ ಮತ್ತೆಲ್ಲ ಕೆಲಸಗಳಿಗೆ ರಜೆ ನೀಡಲಾಗಿದೆ. ಡಾ.ರಾಜ್​ಕುಮಾರ್ ಕುಟುಂಬ ಭಾಗಿಯಾಗಲಿದ್ದು, ದಕ್ಷಿಣ ಭಾರತದ ಖ್ಯಾತ ಕಲಾವಿದರು, ರಾಜಕೀಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಹಾಗೂ ಅವರ ಕುಟುಂಬದವರು ‘ಪುನೀತ ನಮನ’ದಲ್ಲಿ ಉಪಸ್ಥಿತರಿರಲಿದ್ದಾರೆ. ಪಾಸ್ ಇದ್ದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದ್ದು, 2000 ಜನರು ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

ಕಾರ್ಯಕ್ರಮದ ರೂಪುರೇಷೆಯನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಸಿದ್ಧಪಡಿಸಿದ್ದು, ಕಾರ್ಯಕ್ರಮದ ಪ್ರಾರಂಭದಲ್ಲಿ ಹಾಡಿನ ಮೂಲಕ ಪುನೀತ ರಾಜಕುಮಾರ ಅವರಿಗೆ ಗೀತ ನಮನ ಸಲ್ಲಿಸಲಾಗುತ್ತದೆ. ಅವರ ಬಗ್ಗೆ 5 ನಿಮಿಷದ ಹಾಡನ್ನು ತಯಾರಿಸಲಾಗಿದೆ. ಹಲವು ಗಾಯಕ, ಗಾಯಕಿಯರು ವೇದಿಕೆ ಮೇಲೆ ಅಪ್ಪು ಹಾಡುಗಳ ಹಾಡುವ ಮೂಲಕ ನಮನ ಸಲ್ಲಿಸಲಿದ್ದಾರೆ. ವೇದಿಕೆ ಮೇಲೆ ಯಾವುದೇ ಕುರ್ಚಿಗಳು ಇರುವುದಿಲ್ಲ ಬದಲಾಗಿ, ಕೇವಲ ಎಲ್ ಇ ಡಿ ವಾಲ್ ಇರಲಿದೆ. ನಟರು ಪುನೀತ್‌ ಜೊತೆ ತಮ್ಮ ಒಡನಾಟವನ್ನು ಹಂಚಿಕೊಳ್ಳಲಿದ್ದಾರೆ ಎಂದು ಸಂಗೀತ ನಿರ್ದೇಶಕ ಗುರುಕಿರಣ್ ಮಾಹಿತಿ ನೀಡಿದ್ದಾರೆ.
ನಟ ಪುನೀತ್ ಸಿನಿಮಾಗಳ ಹಾಡಿನ ಮೂಲಕ ನಮನ ಸಲ್ಲಿಸಲಾಗುತ್ತಿದ್ದು, ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಸಾಧು ಕೋಕಿಲ, ಮಂಜುಳಾ ಗುರುರಾಜ್, ಹೇಮಂತ್, ಅನುರಾಧಾ ಭಟ್, ಸುನಿತಾ, ಇಂದು ನಾಗರಾಜ್, ಚೈತ್ರಾ, ಶಮಿತಾ ಮಲ್ನಾಡ್‌ ಸ್ವರಾಭಿಷೇಕ ನಡೆಸಿಕೊಡಲಿದ್ದಾರೆ.
ನಟರಾದ ಸುದೀಪ್, ಯಶ್, ಗಣೇಶ್, ಉಪೇಂದ್ರ, ರವಿಚಂದ್ರನ್, ಶ್ರೀಮುರಳಿ, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಧ್ರುವ ಸರ್ಜಾ ಸೇರಿದಂತೆ‌ ಕನ್ನಡದ ಎಲ್ಲಾ ಕಲಾವಿದರು ಭಾಗಿ ಆಗಲಿದ್ದು, ಪುನೀತ್ ಜೊತೆ ನಟಿಸಿದ ಎಲ್ಲಾ ನಾಯಕಿಯರು, ಹಿರಿಯ ಕಲಾವಿದರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ರಾಜಕೀಯ ರಂಗದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವ ಸಂಪುಟ ಭಾಗವಹಿಸುವ ನಿರೀಕ್ಷೆಯಿದೆ. ಮೈಸೂರಿನ‌ ಮಹಾರಾಜ ಯದುವೀರ್ ಕೂಡ ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ನಾಗೇಂದ್ರ ಪ್ರಸಾದ್ ಬರೆದಿರುವ ಹಾಡಿನ ಮೂಲಕ ಪುನೀತ್​ಗೆ ನಮನ ಸಲ್ಲಿಸಲಾಗುತ್ತದೆ. ಗುರುಕಿರಣ್ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು, ಈ ಗೀತೆಯ ಮೂಲಕ ಕಾರ್ಯಕ್ರಮ ಆರಂಭ ಆಗಲಿದೆ. ಮಧ್ಯಾಹ್ಯ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ ವೇಳೆ ಬಿಜೆಪಿಗೆ ಶಾಕ್ : ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿಜೆಪಿ ಸದಸ್ಯ ಕೆ.ಪಿ.ನಂಜುಂಡಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement