ರಸ್ತೆ ಅಪಘಾತದಲ್ಲಿ ಬಾಲಿವುಡ್‌ ನಟ ಸುಶಾಂತ್​ ಸಿಂಗ್‌ ರಜಪೂತ್‌ 6 ಸಂಬಂಧಿಗಳ ಸಾವು ; ನಾಲ್ವರ ಸ್ಥಿತಿ ಗಂಭೀರ

ನವದೆಹಲಿ : ಬಿಹಾರದ ಲಖಿಸರಾಯ್ ಎಂಬಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಐವರು ಸಂಬಂಧಿಗಳು ಸೇರಿ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ.
ವರದಿಯ ಪ್ರಕಾರ, ಸಿಕಂದರಾ-ಶೇಖ್‌ಪುರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 333 ರಲ್ಲಿ ಅವರು ಪ್ರಯಾಣಿಸುತ್ತಿದ್ದ ಎಸ್‌ಯುವಿ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಲಾರಿ ಚಾಲಕ ಹಾಗೂ ಸಹಾಯಕ ಸ್ಥಳದಿಂದ ಪರಾರಿಯಾಗಿದ್ದಾರೆ.
“ಮಂಗಳವಾರ ಮುಂಜಾನೆ ಪಿಪಾರಾ ಗ್ರಾಮದ ಬಳಿ ಎಸ್‌ಯುವಿ ಚಾಲಕ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಾಗ ಈ ಅಪಘಾತ ಸಂಭವಿಸಿದೆ. ಸಂತ್ರಸ್ತರು ಪಾಟ್ನಾದಿಂದ ಜಮುಯಿಗೆ ಹಿಂತಿರುಗುತ್ತಿದ್ದರು” ಎಂದು ಪೊಲೀಸ್ ವರಿಷ್ಠಾಧಿಕಾರಿ ಸುಶೀಲ್ ಕುಮಾರ್ ತಿಳಿಸಿದ್ದಾರೆ.ನಾಲ್ವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಪ್ರಸ್ತುತ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಗಾಯಗೊಂಡಿರುವ ಬಲ್ಮುಕುಂದ್ ಸಿಂಗ್ ಮತ್ತು ದಿಲ್ ಖುಷ್ ಸಿಂಗ್ ಅವರನ್ನು ಚಿಕಿತ್ಸೆಗಾಗಿ ಪಾಟ್ನಾಗೆ ಕಳುಹಿಸಲಾಗಿದ್ದು, ಉಳಿದ ಇಬ್ಬರು, ವಾಲ್ಮೀಕಿ ಸಿಂಗ್ ಮತ್ತು ತೋನು ಸಿಂಗ್ ಅವರನ್ನು ಲಖಿಸರಾಯ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸತ್ತವರಲ್ಲಿ ಎಡಿಜಿ ಓಂಪ್ರಕಾಶ್ ಸಿಂಗ್ (ಸುಶಾಂತ್‌ ಸಿಂಗ್‌ ಅವರ ಸೋದರ ಮಾವ) ಅವರ ಸೋದರಳಿಯ ಮತ್ತು ಸೊಸೆ ಮತ್ತು ಮೃತರ ಇತರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಲಖಿಸರಾಯ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಓಂಪ್ರಕಾಶ್ ಸಿಂಗ್ ಅವರ ಸಹೋದರಿಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ಇವರು ಮನೆಗೆ ಮರಳುತ್ತಿದ್ದರು. ಬೆಳಗ್ಗೆ 6 ಗಂಟೆ ಸುಮಾರಿಗೆ ವಾಹನ ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದ ಪರಿಣಾಮ ಕಾರು ಜಖಂಗೊಂಡಿತ್ತು. ನಾಲ್ವರು ಪ್ರಯಾಣಿಕರ ಶವಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು ಹಾಗೂ ಚಾಲಕ ಮತ್ತು ಇತರ ಪ್ರಯಾಣಿಕರ ದೇಹವು ವಾಹನದಲ್ಲಿ ಸಿಲುಕಿಕೊಂಡಿತ್ತು. ನಂತರ ಸ್ಥಳೀಯರು ಅದನ್ನು ಹೊರತೆಗೆದಿದ್ದಾರೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   26/11ರ ಮುಂಬೈ ಭಯೋತ್ಪಾಕ ದಾಳಿ: ಹೇಮಂತ್ ಕರ್ಕರೆ ಕೊಂದಿದ್ದು ಉಗ್ರ ಕಸಬ್‌ ಅಲ್ಲ, ಕೊಂದಿದ್ದು ಆರ್‌ ಎಸ್‌ ಎಸ್ ನಂಟಿನ ಪೊಲೀಸ್‌ ಅಧಿಕಾರಿ ; ಕಾಂಗ್ರೆಸ್​ ನಾಯಕನ ವಿವಾದಿತ ಹೇಳಿಕೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement