ಪುನೀತ್‌ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ಪತ್ನಿ ಅಶ್ವಿನಿ

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ನಿಧನದ ನಂತರ ಅವರ ಬಗ್ಗೆ ಕುಟುಂಬಸ್ಥರು, ಗಣ್ಯರು, ಅಭಿಮಾನಿಗಳು ಭಾವನಾತ್ಮಕವಾದ ಮಾತುಗಳನ್ನಾಡಿದ್ದರು. ಪುನೀತ್‌ ಪತ್ನಿ ಅಶ್ವಿನಿ ಅವರುಅಭಿಮಾನಿಗಳು ತೋರಿದ ಪ್ರೀತಿಗೆ ಕೃತಜ್ಞತೆ ಸಲ್ಲಿಸಿ ಭಾವನಾತ್ಮಕವಾಗಿ ಪತ್ರ ಬರೆದಿದ್ದಾರೆ.
ಪುನೀತ್‌ ರಾಜ್‌ಕುಮಾರ್‌ ಅವರ ಅಕಾಲಿಕ ಅಗಲಿಕೆ ನಮಗಷ್ಟೇ ಅಲ್ಲದೇ ಇಡೀ ರಾಜ್ಯಕ್ಕೆ ಆಘಾತಕಾರಿ ವಿಷಯ. ನಿಷ್ಕಲ್ಮಶ ಪ್ರೀತಿಯಿಂದ, ಅಕ್ಕರೆಯ ಅಭಿಮಾನದಿಂದ ಅವರನ್ನು ʼಪವರ್‌ ಸ್ಟಾರ್‌ʼ ಆಗಿ ರೂಪಿಸಿದ್ದ ನಿಮ್ಮೆಲ್ಲರಿಗೆ ಅವರ ವಿದಾಯ ತಂದಿತ್ತ ದುಃಖ ಎಷ್ಟಿರಬಹುದೆಂದು ಊಹಿಸಲು ಸಾಧ್ಯವಿಲ್ಲ ಅವರು ಹೇಳಿದ್ದಾರೆ.
ಆದರೂ ಇಂತಹ ಸಂದರ್ಭದಲ್ಲಿ ನೀವುಗಳು ಎಲ್ಲಿಯೂ ಸಂಯಮ ಕಳೆದುಕೊಳ್ಳದೇ, ಅಹಿತಕರ ಘಟನೆಗಳು ನಡೆಯಲು ಅವಕಾಶ ಕೊಡದೆ ಅವರಿಗೊಂದು ಅತ್ಯಂತ ಗೌರವಯುತ ಬೀಳ್ಕೊಡುಗೆ ನೀಡುವಲ್ಲಿ ಸಹಕರಿಸಿದ್ದೀರಿ. ಸಿನಿಮಾ ಪ್ರೇಮಿಗಳಷ್ಟೇ ಅಲ್ಲದೇ, ವಯೋಮಾನದ ಮಿತಿಯಿಲ್ಲದೇ, ದೇಶವಿದೇಶಗಳಿಂದ ಕೋಟ್ಯಂತರ ಜನರು ಸಂತಾಪ ಸೂಚಿಸುವುದನ್ನು ಕಂಡಾಗ ಮನಸ್ಸು ಭಾರವಾಗುತ್ತದೆ. ನಿಮ್ಮ ಪ್ರೀತಿಯ ಅಪ್ಪು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಾ ಸಾವಿರಾರು ಸಂಖ್ಯೆಯಲ್ಲಿ ನೇತ್ರದಾನಕ್ಕೆ ನೋಂದಣಿ ಮಾಡಿಸುವುದನ್ನು ನೋಡಿದಾಗ ಕಣ್ತುಂಬಿ ಬರುತ್ತದೆ. ಅವರನ್ನು ಆದರ್ಶವಾಗಿಟ್ಟುಕೊಂಡು ನೀವುಗಳು ಮಾಡುವ ಸತ್ಕಾರ್ಯಗಳಲ್ಲಿ, ಅವರ ನೆನಪುಗಳು ನಿಮ್ಮಲ್ಲಿ ಮೂಡಿಸುವ ಉತ್ಸಾಹದಲ್ಲಿ ಅವರೆಂದಿಗೂ ಜೀವಂತವಾಗಿರುತ್ತಾರೆ. ವಿಶ್ವದಾದ್ಯಂತ ನಮ್ಮ ಶೋಕವನ್ನು ಹಂಚಿಕೊಂಡು ಬೆಂಬಲಕ್ಕೆ ನಿಂತ ಎಲ್ಲಾ ಸಹೃದಯಿ ಅಭಿಮಾನಿ ದೇವರುಗಳು ಮತ್ತು ಸಾರ್ವಜನಿಕರಿಗೆ ನಮ್ಮ ಇಡೀ ಕುಟುಂಬದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಎಂದು ಪುನೀತ್‌ ರಾಜಕುಮಾರ ಅವರ ಪತ್ನಿ ಅಶ್ವಿನಿ ಭಾವನಾತ್ಮಕ ಪತ್ರ ಬರೆದಿದ್ದಾರೆ.

ಪ್ರಮುಖ ಸುದ್ದಿ :-   ಎಸ್‌ಐಟಿ ನೋಟಿಸ್​: ವಿಚಾರಣೆಗೆ ಹಾಜರಾಗಲು ಸಮಯ ಕೇಳಿದ ಪ್ರಜ್ವಲ್‌ ; ಪತ್ರದಲ್ಲೇನಿದೆ..?

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement