ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗೆ ಬಸವಣ್ಣನವರ ಅನುಭವ ಮಂಟಪವೇ ಅಡಿಪಾಯ: ೮೨ ನೇ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನದಲ್ಲಿ ಹೊರಟ್ಟಿ

ಶಿಮ್ಲಾ: ೧೨ ನೇ ಶತಮಾನದಲ್ಲಿ ವಿಶ್ವಗುರು ಬಸವಣನವರು ನಿರ್ಮಿಸಿದ ಅನುಭವ ಮಂಟಪ ಇಡೀ ವಿಶ್ವದ ಪ್ರಪ್ರಥಮ ಶಾಸನ ಸಭೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ವಚನ ಸಾಹಿತ್ಯದ ಮೌಲ್ಯಗಳೇ ಪ್ರಜಾಪ್ರಭುತ್ವದ ಯಶಸ್ಸಿನ ಮೂಲ ಸೂತ್ರಗಳಾಗಿವೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಪಾದಿಸಿದ್ದಾರೆ.
ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆಯುತ್ತಿರುವ ೮೨ನೇ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನ ಮತ್ತು ಶತಮಾನೋತ್ಸವ ಸಮಾರಂಭದ ಉದ್ಘಾಟನಾ ಸಮಾರಂಭದ ಬಳಿಕ “ಸಂವಿಧಾನ, ಸದನ ಮತ್ತು ನಾಗರೀಕರ ಬಗೆಗೆ ಪೀಠಾಸಿನಾಧಿಕಾರಿಗಳ ಜವಾಬ್ದಾರಿ” ಕುರಿತು ವಿಚಾರ ಮಂಡಿಸಿದ ಅವರು, “ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು” ಎಂಬ ಸಂದೇಶ ಸಾರುವ ಸಾರ್ವಕಾಲಿಕ ವಿಚಾರಧಾರೆ ಅಡಿಯಲ್ಲಿ ನಿರ್ಮಾಣಗೊಂಡಿದ್ದ ಬಸವಣ್ಣನವರ ಅನುಭವ ಮಂಟಪ, ಪ್ರಜಾಪ್ರಭುತ್ವ ಪರಿಕಲ್ಪನೆಗೆ ಮೂಲ ಅಡಿಪಾಯವಾಗಿದೆ. ತಮ್ಮ ವಚನಗಳ ಮೂಲಕ ಸಾಮಾಜಿಕ ಸಬಲೀಕರಣ, ಸಮಾನತೆ, ಸೌಹಾರ್ದತೆ, ಸಹೋದರತ್ವ ಕುರಿತು ಇಡೀ ಸಮಾಜಕ್ಕೆ ಸಂದೇಶ ಸಾರಿರುವ ಅವರ ಸಂದೇಶಗಳು ಇಂದಿನ ಪ್ರಜಾಪ್ರಭುತ್ವದ ಮೂಲ ಆಶಯಗಳಾಗಿ ರೂಪಗೊಂಡಿವೆ. ಬಸವಣ್ಣನವರು ಕರ್ನಾಟಕದವರು ಎಂಬುದು ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವ ನೆಲಗಟ್ಟಿನಲ್ಲಿ ರೂಪುಗೊಂಡಿದ್ದ ಅಂದಿನ ಅನುಭವಮಂಟಪ, ಸರ್ವ ಜಾತಿ, ಸಮುದಾಯ ಹಾಗೂ ಲಿಂಗಗಳಿಗೆ ಪ್ರಾತಿನಿಧ್ಯ ನೀಡಿ ಪ್ರಜಾಸತ್ತಾತ್ಮಕ ಮೌಲ್ಯಗಳ ವರ್ಧನೆಗೆ ಬೀಜಾಂಕುರ ನೀಡಿದ್ದು, ಇಂದಿನ ೨೧ ನೇ ಶತಮಾನದಲ್ಲಿ ಅದು ಹೆಮ್ಮರವಾಗಿ ಬೆಳೆದಿದೆ. ಬಸವಣ್ಣನವರ ಅರಿವು, ಆಚಾರ ಮತ್ತು ಅನುಭವದ ತತ್ವಗಳ ಆಧಾರದಲ್ಲಿ ನಿರ್ಮಾಣಗೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆ, ಭಾರತವು ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಯಶಸ್ವಿಯಾಗಿರುವುದು ಸಂತಸದ ಸಂಗತಿ ಎಂದು ಹೊರಟ್ಟಿ ತಿಳಿಸಿದರು.
ತಮ್ಮ ೪ ದಶಕಗಳ ಶಾಸಕಾಂಗ ಅನುಭವ ಕುರಿತು ಮಾಹಿತಿ ಹಂಚಿಕೊಂಡ ಸಭಾಪತಿ ಹೊರಟ್ಟಿ, ಸದನಗಳ ಯಶಸ್ಸು ಮತ್ತು ಸಾರ್ಥಕತೆ ಬಗ್ಗೆ ಹಲವು ಸಲಹೆ ನೀಡಿದರು. ಸದನದ ಕಾರ್ಯಕಲಾಪಗಳ ಗುಣಮಟ್ಟ ಹಾಗೂ ನಿಗದಿತ ಕಾರ್ಯಸೂಚಿ ಕುರಿತಂತೆ ಸಲಹೆ ನೀಡಿದ ಅವರು, ಕಲಾಪ ಸಲಹಾ ಸಮಿತಿಯಲ್ಲಿ ಎಲ್ಲಾ ನಿರ್ದಿಷ್ಟ ವಿಷಯಗಳ ಕುರಿತಾಗಿ ಸದನದ ಘನತೆ ಹೆಚ್ಚಿಸುವ ನಿಟ್ಟಿನಲ್ಲಿ ನಿರ್ಣಯ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಕಲಾಪಗಳಲ್ಲಿ ಸದಸ್ಯರ ವರ್ತನೆ, ವಿಷಯ ಮಂಡನೆ ಹಾಗೂ ಸಹಭಾಗಿತ್ವ ಕುರಿತು ಕಾಲಕಾಲಕ್ಕೆ ಸೂಕ್ತ ತರಬೇತಿಯ ಅವಶ್ಯಕತೆಯಿದೆ. ಸದನದಲ್ಲಿ ಸಮರ್ಥವಾಗಿ ವಿಷಯ ಮಂಡಿಸಿ ಸಕ್ರಿಯವಾಗಿ ಪಾಲ್ಗೊಳ್ಳುವ ಸದಸ್ಯರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಿ ಕಲಾಪದ ಘನತೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಿದೆ. ಕಾರ್ಯ ಸೂಚಿಯ ಪ್ರಕಾರ ಅಂದಿನ ವಿಷಯ ಕುರಿತು ಅಂದೇ ಚರ್ಚೆ ನಡೆಸಿ ಮುಕ್ತಾಯಗೊಳಿಸಬೇಕು. ಹಾಗೂ ಸದನದ ಕಲಾಪಗಳ ಸಂಧರ್ಭದಲ್ಲಿ ಅನಗತ್ಯವಾಗಿ ಗೊಂದಲ, ಗದ್ದಲ ಉಂಟುಮಾಡುವುದು, ಅನಾವಶ್ಯಕವಾಗಿ ಸದನದ ಬಾವಿಗೆ ಇಳಿದು ಕಲಾಪಕ್ಕೆ ತೊಂದರೆ ಉಂಟುಮಾಡುವುದು. ಪ್ರಚಾರಕ್ಕಾಗಿ ಧರಣಿ, ಪ್ರತಿಭಟನೆ, ಸದನ ಬಹಿಷ್ಕಾರ ಮುಂತಾದ ಅಸಂವಿಧಾನಿಕ ಕಾರ್ಯಗಳನ್ನು ನಡೆಸಬಾರದು ಎಂದು ಹೇಳಿದರು.
ಸದನದ ಒಳಗಡೆ ಬಿತ್ತಿ ಚಿತ್ರಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗುವ ಪರಿಪಾಠಕ್ಕೆ ಇತೀಶ್ರಿ ಹಾಡುವುದು ಸೇರಿದಂತೆ ಹಲವು ರೀತಿಯ ಸಲಹೆಗಳನ್ನು ಬಸವರಾಜ ಹೊರಟ್ಟಿ ಸಭೆಯಲ್ಲಿ ನೀಡಿ, ಅವುಗಳ ಪಾಲನೆ ಕುರಿತಂತೆ ಪೀಠಾಸೀನಾಧಿಕಾರಿಗಳ ಸಭೆ, ನಿರ್ಣಯ ಸ್ವೀಕರಿಸಿ, ಪ್ರಜಾಪ್ರಭುತ್ವದ ಸಾರ್ಥಕತೆಗೆ ಮುಂದಡಿ ಇಡಬೇಕೆಂದು ಮನವಿ ಮಾಡಿದರು.
ಇದಕ್ಕೂ ಮೊದಲು ೨ ದಿನಗಳ ೮೨ ನೇ ಅಖಿಲ ಭಾರತ ಪೀಠಾಸಿನಾಧಿಕಾರಿಗಳ ಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಲೋಕಸಭಾಧ್ಯಕ್ಷ ಓಂ ಬಿರ್ಲಾ, ಹಿಮಾಚಲ ವಿ ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ನಾರಾಯಣ ಸಿಂಗ್, ಧಾನ ಸಭಾಧ್ಯಕ್ಷ ವಿಪಿನ್ ಸಿಂಗ್ ಪರ್ಮಾರ್, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜಯರಾಮ ಠಾಕೂರ್, ಕರ್ನಾಟಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳ ವಿಧಾನಸಭಾಧ್ಯಕ್ಷರು, ಎಲ್ಲಾ ರಾಜ್ಯಗಳ ಸಭಾಪತಿಗಳು ಪಾಲ್ಗೊಂಡಿದ್ದರು. ಸಮ್ಮೇಳನ ಗುರುವಾರ ಸಮಾಪನಗೊಳ್ಳಲಿದೆ.

ಪ್ರಮುಖ ಸುದ್ದಿ :-   ಭಾರಿ ಮಳೆ : ಉತ್ತರ ಕನ್ನಡ ಜಿಲ್ಲೆ 4 ತಾಲೂಕುಗಳ ಶಾಲೆಗಳಿಗೆ ನಾಳೆ (ಜುಲೈ 4)ರಜೆ ಘೋಷಣೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement