ಬೆಂಗಳೂರು: ಉದ್ಯಮ ಕ್ಷೇತ್ರದಲ್ಲಿ ಹೊಸ ಆಲೋಚನೆಗಳನ್ನು ಅಳವಡಿಸಿಕೊಂಡರೆ ಐಟಿ – ಬಿಟಿ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದರು.
ಬೆಂಗಳೂರು ತಂತ್ರಜ್ಞಾನ ಶೃಂಗ (ಬಿಟಿಎಸ್ 2021) ಅನ್ನು ಇಂದು (ಬುಧವಾರ) ಉದ್ಘಾಟಿಸಿ ಮಾತನಾಡಿದ ಅವರು,
ಇತ್ತೀಚಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದೆ. ಇದರಿಂದ ಪಾಠ ಕಲಿತು ಎಲ್ಲ ಕ್ಷೇತ್ರಗಳು ಸುಧಾರಣೆಗೊಳ್ಳಬೇಕು. ಈ ನಿಟ್ಟಿನಲ್ಲಿ ಬೆಂಗಳೂರು ತಂತ್ರಜ್ಞಾನ ಶೃಂಗ- 2021 ಉತ್ತಮ ವೇದಿಕೆಯಾಗಿದೆ ಎಂದರು.
ವಿಶ್ವದ ಎಲ್ಲ ಅತಿದೊಡ್ಡ ಸಂಸ್ಥೆಗಳ ಮುಂಚೂಣಿಯಲ್ಲಿ ಭಾರತೀಯರಿದ್ದಾರೆ. ಇದು ಭಾರತೀಯರ ಜ್ಞಾನ, ಶ್ರಮಕ್ಕೆ ನಿದರ್ಶನವಾಗಿದೆ. ಮುಂಬರುವ ದಿನಗಳಲ್ಲಿ ಜ್ಞಾನಾರ್ಜನೆ ಬಗ್ಗೆ ಹೆಚ್ಚು ಒತ್ತು ನೀಡಬೇಕು ಎಂದರು.
ಇಡೀ ದೇಶ ಡಿಜಿಟಲ್ ಇಂಡಿಯಾದತ್ತ ಮುನ್ನುಗ್ಗುತ್ತಿದೆ. ಇದರಿಂದ ನೇರ ಹೂಡಿಕೆಯಲ್ಲಿ ಹೆಚ್ಚು ಪ್ರಗತಿ ಆಗುತ್ತಿದೆ. ಒಟ್ಟಿನಲ್ಲಿ ತಂತ್ರಜ್ಞಾನ ಜನ ಸಾಮಾನ್ಯನಿಗೆ ತಲುಪುವುದು ಮುಖ್ಯ. ಭಾರತ ಈ ಹಾದಿಯಲ್ಲಿ ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಖ್ಯಾತ ಚಲನಚಿತ್ರ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಂತಾಪ ಸೂಚಿಸಿದರು. ಪುನೀತ್ ರಾಜ್‌ಕುಮಾರ್ ಮನುಷ್ಯತ್ವ ಹೊಂದಿದ್ದ ಉತ್ತಮ ನಟ ಎಂದು ಬಣ್ಣಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ ತಂತ್ರಜ್ಞಾನದಲ್ಲಿ ರಾಜ್ಯ ಬಹಳ ಮುಂದುವರೆದಿದ್ದು, ಈ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ಇನ್ನೂ ಆಗಬೇಕಿದೆ. ಬೆಂಗಳೂರು ತಂತ್ರಜ್ಞಾನದ ಹಬ್ ಆಗಿದೆ ಎಂದರು.
ಬೆಂಗಳೂರಲ್ಲಿ ಆವಿಷ್ಕಾರ ಮಾಡುವ ಮಾನವ ಸಂಪನ್ಮೂಲ ಇದೆ. ಬೆಂಗಳೂರು ಟೆಕ್ ಸಮ್ಮಿಟ್ ಅನ್ನು ಇನ್ನಷ್ಟು ಯಶಸ್ಸಾಗುವಂತೆ ಮಾಡುವ ಗುರಿ ಹೊಂದಿದ್ದೇವೆ. ರಾಜ್ಯದ ನೀತಿಗಳು ದೂರದೃಷ್ಟಿಯುಳ್ಳದ್ದಾಗಿವೆ, ಕರ್ನಾಟಕವನ್ನು ತಂತ್ರಜ್ಞಾನದಲ್ಲಿ ಮುಂಚೂಣಿಯ ರಾಜ್ಯ ೆಂದು ವ್ಯಾಖ್ಯಾನಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ