ನೀವು ಎಲ್ಲಿದ್ದೀರೆಂದು ಉತ್ತರಿಸುವ ವರೆಗೂ ಪ್ರಕರಣದ ವಿಚಾರಣೆ ಮಾಡುವುದಿಲ್ಲ: ಪರಮ್‌ಬೀರ್‌ ಸಿಂಗ್‌ಗೆ ತಿಳಿಸಿದ ಸುಪ್ರೀಂಕೋರ್ಟ್

ನವದೆಹಲಿ: ತಲೆ ಮರೆಸಿಕೊಂಡಿರುವ ಕಾರಣಕ್ಕೆ ‘ಘೋಷಿತ ಅಪರಾಧಿ’ ಎಂದು ಪರಿಗಣಿಸಲ್ಪಟ್ಟಿರುವ ಮುಂಬೈ ಪೊಲೀಸ್‌ ಮಾಜಿ ಆಯುಕ್ತ ಪರಮ್‌ಬೀರ್‌ ಸಿಂಗ್ ಅವರು ತಾನು ಎಲ್ಲಿದ್ದೇನೆಂದು ತಿಳಿಸುವವರೆಗೂ ಮಹಾರಾಷ್ಟ್ರ ಸರ್ಕಾರ ನಡೆಸುತ್ತಿರುವ ತನಿಖೆ ಪ್ರಶ್ನಿಸಿರುವ ಅವರ ಅರ್ಜಿಯ ವಿಚಾರಣೆ ನಡೆಸುವುದಿಲ್ಲ ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ.
ನ್ಯಾಯಾಲಯಕ್ಕೆ ಮನವಿಯನ್ನು ವಕೀಲರ ಮೂಲಕ ಸಲ್ಲಿಸಲಾಗುತ್ತಿದೆಯೇ ವಿನಃ ಅವರೆಲ್ಲಿದ್ದಾರೆ ಎಂಬುದು ತಿಳಿದಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ. ಎಂ. ಸುಂದರೇಶ್‌ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತು. ಹೀಗಾಗಿ ಅರ್ಜಿ ಆಲಿಸುವುದಿಲ್ಲ ಮತ್ತು ಯಾವುದೇ ರಕ್ಷಣೆ ನೀಡುವುದಿಲ್ಲ ಎಂದು ಸಿಂಗ್‌ ಪರ ಹಾಜರಿದ್ದ ವಕೀಲರಿಗೆ ಪೀಠ ತಿಳಿಸಿ ಪ್ರಕರಣವನ್ನು ಸೋಮವಾರಕ್ಕೆ ಮುಂದೂಡಿತು.
ಮಹಾರಾಷ್ಟ್ರ ಸರ್ಕಾರ ತನ್ನ ವಿರುದ್ಧ ಆರಂಭಿಸಿರುವ ಎರಡು ಪ್ರಕರಣಗಳ ತನಿಖೆ ಪ್ರಶ್ನಿಸಿ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಬಾಂಬೆ ಹೈಕೋರ್ಟ್‌ ತೀರ್ಪಿನ ವಿರುದ್ಧದ ಮನವಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ. ಸಿಂಗ್ ಹಲವು ವಾರಗಳಿಂದ ತಲೆಮರೆಸಿಕೊಂಡಿದ್ದು, ಅವರೆಲ್ಲುದ್ದಾರೆಂದು ತಿಳಿದಿಲ್ಲ. ಬುಧವಾರ ಮುಂಬೈ ನ್ಯಾಯಾಲಯವು ಅಧಿಕಾರಿಯನ್ನು ‘ಘೋಷಿತ ಅಪರಾಧಿ’ ಎಂದು ಪರಿಗಣಿಸಲು ಪೊಲೀಸರಿಗೆ ಅನುಮತಿ ನೀಡಿದೆ.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement