ಆಗ್ರಾ ಆಸ್ಪತ್ರೆಯಲ್ಲಿ ದೇವರಿಗೆ ಬ್ಯಾಂಡೇಜ್‌…!: ಗೋಳಾಡಿ ಕೃಷ್ಣನ ವಿಗ್ರಹದ ಮುರಿದ ಕೈಗೆ ವೈದ್ಯರಿಂದ ಬ್ಯಾಂಡೇಜ್ ಹಾಕಿಸಿಕೊಂಡ ಅರ್ಚಕ…!!

ಆಗ್ರಾ: ಇತ್ತೀಚಿನ ದಿನಗಳಲ್ಲಿ ಕರಾಳ ಘಟನೆಗಳಿಗೆ ಸಾಕ್ಷಿಯಾಗುತ್ತಿರುವ ಉತ್ತರ ಪ್ರದೇಶದಲ್ಲಿ ಈಗ ಚಿತ್ರವಿಚಿತ್ರ ಘಟನೆಯೊಂದು ನಡೆದಿದೆ.
ಉತ್ತರ ಪ್ರದೇಶದ ಆಗ್ರಾದ ಜಿಲ್ಲಾ ಆಸ್ಪತ್ರೆಗೆ ಇಂದು (ಶುಕ್ರವಾರ) ಅರ್ಚಕರೊಬ್ಬರು ಕೃಷ್ಣನ ವಿಗ್ರಹವನ್ನು ಹೊತ್ತು ಬಂದಿದ್ದರು. ನನ್ನ ಕೃಷ್ಣನ ಕೈ ಮುರಿದು ಹೋಗಿದೆ. ಇದಕ್ಕೆ ಬ್ಯಾಂಡೇಜ್ ಹಾಕಿ ಎಂದು ವೈದ್ಯರ ಬಳಿ ಮನವಿ ಮಾಡಿದ್ದು, ಅವರ ಮಾತನ್ನು ಕೇಳಿದ ವೈದ್ಯರೇ ಕೇಳಿ ಅವಾಕ್ಕಾಗಿದ್ದಾರೆ…!
ಅರ್ಚಕ ಬೆಳಿಗ್ಗೆ ಸ್ನಾನ ಮಾಡುವಾಗ ದೇವರ ಕೈ ಆಕಸ್ಮಿಕವಾಗಿ ಮುರಿದಿದೆ ಎಂದು ಅರ್ಚಕ ಹೇಳಿಕೊಂಡಿದ್ದಾರೆ. ದೇವರ ವಿಗ್ರಹಕ್ಕೆ ಚಿಕಿತ್ಸೆ ನೀಡುವಂತೆ ಒತ್ತಾಯಿಸಿ ಆಸ್ಪತ್ರೆಗೆ ಬಂದ ಅರ್ಚಕನನ್ನು ನೋಡಿದ ಸಿಬ್ಬಂದಿ ಒಮ್ಮೆಲೇ ಏನು ಮಾಡುವುದೆಂದು ತಿಳಿಯದೆ ಕಂಗಾಲಾದರು.
ವೈದ್ಯರು ಎಷ್ಟೇ ಹೇಳಿದರೂ ಅರ್ಚಕ ಮಾತ್ರ ಕೇಳುವ ಸ್ಥಿತಿಯಲ್ಲಿರಲಿಲ್ಲ. ನನ್ನ ಕೃಷ್ಣನಿಗೆ ನೀವು ಬ್ಯಾಂಡೇಜ್ ಹಾಕುವವರೆಗೂ ನಾವು ಇಲ್ಲಿಂದ ಹೋಗುವುದಿಲ್ಲ. ಇವತ್ತು ಬೆಳಗ್ಗೆ ಕೃಷ್ಣನ ವಿಗ್ರಹಕ್ಕೆ ಸ್ನಾನ ಮಾಡಿಸುವಾಗ ಆಕಸ್ಮಿಕವಾಗಿ ಕೈ ಮುರಿದು ಹೋಗಿದೆ. ಈ ಕೈಯನ್ನು ಜೋಡಿಸಿಕೊಡಿ ಎಂದು ವೈದ್ಯರ ಬಳಿ ಅರ್ಚಕ ಹಠ ಹಿಡಿದಿದ್ದಾರೆ.
ಕೃಷ್ಣನ ವಿಗ್ರಹಕ್ಕೆ ಬ್ಯಾಂಡೇಜ್ ಹಾಕದೆ ಆತ ಹೋಗುವ ಲಕ್ಷಣಗಳು ಕಾಣದ ಹಿನ್ನೆಲೆಯಲ್ಲಿ ಸ್ವಲ್ಪ ಹಿಂಜರಿಕೆಯ ನಂತರ, ಆಸ್ಪತ್ರೆಯ ಸಿಬ್ಬಂದಿ ‘ಶ್ರೀ ಕೃಷ್ಣ’ ಎಂಬ ಹೆಸರಿನಲ್ಲಿ ನೋಂದಣಿ ಮಾಡಿಸಿ ವಿಗ್ರಹದ ತೋಳಿಗೆ ಬ್ಯಾಂಡೇಜ್ ಮಾಡಿದರು. ಈಗ ವೈದ್ಯರು ಬಾಲ ಕೃಷ್ಣನ ವಿಗ್ರಹಕ್ಕೆ ಬ್ಯಾಂಡೇಜ್ ಹಾಕುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಕೃಷ್ಣನ ಬಾಲ್ಯದ ರೂಪವಾದ ‘ಲಡ್ಡು ಗೋಪಾಲ’ ನ ಕೈ ಮುರಿದುಕೊಂಡು ಅಳುತ್ತಿರುವ ಅರ್ಚಕನ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ವಿಗ್ರಹವನ್ನು ಹೊತ್ತು ಬಂದ ಲೇಖ್ ಸಿಂಗ್ ಕಳೆದ 30 ವರ್ಷಗಳಿಂದ ಅರ್ಜುನ್ ನಗರದ ಖೇರಿಯಾ ಮೋಡ್‌ನಲ್ಲಿರುವ ಪತ್ವಾರಿ ದೇವಸ್ಥಾನದಲ್ಲಿ ಅರ್ಚಕರಾಗಿದ್ದಾರೆ. ಆಸ್ಪತ್ರೆಯಲ್ಲಿ ಮೊದಲು ನನ್ನ ವಿನಂತಿಯನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಇದರಿಂದ ಬೇಸರವಾಗಿ ನಾನು ದೇವರ ವಿಗ್ರಹವನ್ನು ಹಿಡಿದು ಅಳಲು ಪ್ರಾರಂಭಿಸಿದೆ. ಆ ಮೇಲೆ ಅವರು ಕೃಷ್ಣನಿಗೆ ಬ್ಯಾಂಡೇಜ್ ಹಾಕಿದರು ಎಂದು ಅರ್ಚಕರು ಹೇಳಿದ್ದಾರೆ.
ಅರ್ಚಕರು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಆಸ್ಪತ್ರೆಗೆ ಬಂದಿದ್ದರು. ನಂತರ ಸಿಬ್ಬಂದಿ ಬಳಿ ವಿಗ್ರಹಕ್ಕೆ ಚಿಕಿತ್ಸೆ ನೀಡುವಂತೆ ಪಟ್ಟುಹಿಡಿದರು ಎಂದು ಕೆಲವು ಪ್ರತ್ಯಕ್ಷದರ್ಶಿಗಳು ಹೇಳಿಕೊಂಡಿದ್ದಾರೆ.

ಪ್ರಮುಖ ಸುದ್ದಿ :-   'ಅಕ್ರಮ' ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ : ಮಹಾರಾಷ್ಟ್ರ ಸೈಬರ್ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement