ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ವಿಚಾರಣೆ ಮುಂದೂಡುವಂತೆ ಮುಂಬೈ ನ್ಯಾಯಾಲಯಕ್ಕೆ ಸೂಚಿಸಿದ ಬಾಂಬೆ ಹೈಕೋರ್ಟ್

ಮುಂಬೈ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಸದಸ್ಯರೊಬ್ಬರು ಹೂಡಿರುವ ಮಾನಹಾನಿ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್‌ 20ರ ವರೆಗೆ ಮುಂದೂಡುವಂತೆ ಸೋಮವಾರ ಬಾಂಬೆ ಹೈಕೋರ್ಟ್‌ ಆದೇಶಿಸಿದೆ.
ರಾಜಸ್ಥಾನದಲ್ಲಿ 2018ರಲ್ಲಿ ನಡೆದಿದ್ದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಕಮ್ಯಾಂಡರ್‌ ಇನ್‌ ಥೀಫ್‌’ (ಕಳ್ಳರ ಮುಖ್ಯಸ್ಥ) ಎಂದು ರಾಹುಲ್‌ ಗಾಂಧಿ ಕರೆದಿದ್ದರು ಎಂದು ಆರೋಪಿಸಿ ಮಾನಹಾನಿ ಪ್ರಕರಣ ದಾಖಲಿಸಲಾಗಿದೆ.
ಬಿಜೆಪಿಯ ಮಹೇಶ್‌ ಹುಕುಮ್‌ಚಂದ್‌ ಶ್ರೀಶ್ರೀಮಲ್‌ ದಾಖಲಿಸಿರುವ ಮಾನಹಾನಿ ದೂರನ್ನು ವಜಾ ಮಾಡುವಂತೆ ಕೋರಿ ರಾಹುಲ್‌ ಗಾಂಧಿ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಕೆ ಶಿಂಧೆ ನೇತೃತ್ವದ ಏಕಸದಸ್ಯ ಪೀಠ ನಡೆಸಿತು. ದೂರನ್ನು ಆಧರಿಸಿ 2019ರ ಆಗಸ್ಟ್‌ 28ರಂದು ಗಿರ್ಗಾಂವ್‌ನ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಗಾಂಧಿ ವಿರುದ್ಧ ಕ್ರಿಮಿನಲ್‌ ಮಾನಹಾನಿ ಪ್ರಕ್ರಿಯೆ ಆರಂಭಿಸಿದೆ.
ಅರ್ಜಿದಾರರ ಪರ ವಕೀಲ ರೋಹನ್‌ ಮಹದಿಕ್‌ ರಾಹುಲ್‌ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವ ಕಾಲಾವಕಾಶ ಕೋರಿದರು. ಹೀಗಾಗಿ, ಡಿಸೆಂಬರ್‌ 20ರ ವರೆಗೆ ರಾಹುಲ್‌ ಗಾಂಧಿ ವಿರುದ್ಧದ ಮಾನಹಾನಿ ಪ್ರಕರಣದ ವಿಚಾರಣೆ ಮುಂದೂಡುವಂತೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಹೈಕೋರ್ಟ್‌ ಆದೇಶಿಸಿತು. ಎರಡು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಮಹದಿಕ್‌ ಅವರಿಗೆ ನ್ಯಾಯಾಲಯ ಸೂಚಿಸಿದೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement