ಕೋವ್ಯಾಕ್ಸಿನ್ ಡೆಲ್ಟಾ ರೂಪಾಂತರಿ ವಿರುದ್ಧ ಶೇ.50ರಷ್ಟು ಪರಿಣಾಮಕಾರಿ:ಲ್ಯಾನ್ಸೆಟ್ ವರದಿ

ನವದೆಹಲಿ: ಭಾರತದ ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಕೋವಿಡ್‌ ಡೆಲ್ಟಾ ರೂಪಾಂತರಿ ವಿರುದ್ಧ ಶೇ.50ರಷ್ಟು ಪರಿಣಾಮಕಾರಿ ಎಂದು ಲ್ಯಾನ್ಸೆಟ್ ವರದಿ ಮಾಡಿದೆ.
ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರಿ ವಿರುದ್ಧ ಕೋವ್ಯಾಕ್ಸಿನ್ ಲಸಿಕೆ ಶೇ.50ರಷ್ಟು ಪರಿಣಾಮಕಾರಿಯಾಗಿದ್ದು, ಲಕ್ಷಣಸಹಿತ ಕೋವಿಡ್ ತಡೆಯುವಲ್ಲಿ ಕೋವ್ಯಾಕ್ಸಿನ್ ಎರಡು ಡೋಸ್‌ಗಳ ಪರಿಣಾಮಕಾರಿತ್ವ ಶೇ.77.8ರಷ್ಟಿದೆ. ಲಸಿಕೆಯ ಸುರಕ್ಷತೆ ಬಗ್ಗೆ ಯಾವುದೇ ಆತಂಕವಿಲ್ಲ ಎಂದು ವರದಿ ಹೇಳಿದೆ.
ಅಧ್ಯಯನ ಸಂದರ್ಭದಲ್ಲಿ ಡೆಲ್ಟಾ ರೂಪಾಂತರವು ಭಾರತದಲ್ಲಿ ಪ್ರಬಲವಾಗಿತ್ತು, ಆ ವೇಳೆ ದೇಶದಲ್ಲಿ ದೃಢಪಟ್ಟ ಒಟ್ಟು ಪ್ರಕರಣಗಳ ಪೈಕಿ ಶೇ.80ರಷ್ಟು ಡೆಲ್ಟಾ ರೂಪಾಂತರ ಸಂಬಂಧಿತ ಪ್ರಕರಣಗಳಾಗಿದ್ದವು ಎಂದು ವರದಿ ತಿಳಿಸಿದೆ.
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ 2714 ಸಿಬ್ಬಂದಿಯನ್ನು ಏಪ್ರಿಲ್ 15ರಿಂದ ಮೇ 15ರ ವರೆಗಿನ ಅವಧಿಯಲ್ಲಿ ಲ್ಯಾನ್ಸೆಟ್‌ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು.
ಹೈದರಾಬಾದ್‌ನ ಭಾರತ್ ಬಯೋಟೆಕ್ ಕಂಪನಿಯ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)‌ ಸಹಯೋಗದೊಂದಿಗೆ ಕೋವ್ಯಾಕ್ಸಿನ್ ಲಸಿಕೆ ಅಭಿವೃದ್ಧಿಪಡಿಸಿತ್ತು. ಜನವರಿಯಲ್ಲಿ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಇತ್ತೀಚೆಗಷ್ಟೇ ವಿಶ್ವ ಆರೋಗ್ಯ ಸಂಸ್ಥೆಯು ಕೂಡ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿತ್ತು, ಇದರೊಂದಿಗೆ ಲಸಿಕೆಗೆ ಜಾಗತಿಕ ಮನ್ನಣೆ ದೊರೆತಿತ್ತು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement