ಕೋವಿಡ್ ಹೊಸ ರೂಪಾಂತರಿ ಓಮಿಕ್ರಾನ್ ವೈರಾಣುವಿನ ಹರಡುವಿಕೆ ತಡೆಗೆ ಮುನ್ನೆಚ್ಚರಿಕೆ ಕ್ರಮ, ರಾಜ್ಯದಲ್ಲಿ 45 ಲಕ್ಷ ಜನರು 2ನೇ ಡೋಸ್ ಪಡೆಯುವುದು ಬಾಕಿ

ಬೆಂಗಳೂರು: ಕೋವಿಡ್ ಹೊಸ ರೂಪಾಂತರಿ ಓಮಿಕ್ರಾನ್ ವೈರಾಣುವಿನ ಹರಡುವಿಕೆಗೆ ಸಂಬಂಧಿಸಿದಂತೆ ಎಲ್ಲ ಬಗೆಯ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಕೋವಿಡ್ ಲಸಿಕೆ ಎಲ್ಲರೂ ಪಡೆಯುವುದರೊಂದಿಗೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಆರೋಗ್ಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಆಫ್ರಿಕಾ, ಬೋಟ್ಸ್ವಾನ, ಇಸ್ರೇಲ್, ಹಾಂಗ್ ಕಾಂಗ್ ಮೊದಲಾದ ದೇಶಗಳಲ್ಲಿ ಕೋವಿಡ್ ಹೊಸ ರೂಪಾಂತರಿ ವೈರಾಣು ಕಾಣಿಸಿದೆ. ಆದರೆ ಬಾರತದಲ್ಲಿ ಕಂಡುಬಂದಿಲ್ಲ. ಇದಕ್ಕಾಗಿ ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮ ವಹಿಸಲು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಹೊಸ ವೈರಾಣು ಕಂಡುಬಂದಿರುವ ದೇಶಗಳಿಂದ ರಾಜ್ಯದ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಕೋವಿಡ್ ವರದಿ ತಂದಿದ್ದರೂ ಆರ್ ಟಿಪಿಸಿಆರ್ ಪರೀಕ್ಷೆ ಮಾಡಲಾಗುವುದು. ನೆಗೆಟಿವ್ ಬಂದರೆ ಮನೆಯಲ್ಲೇ ಒಂದು ವಾರ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುವುದು. ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗುವುದು. ಏಳು ದಿನಗಳ ಬಳಿಕ ಮತ್ತೆ ಪರೀಕ್ಷೆ ಮಾಡಲಾಗುವುದು. ರೋಗದ ಲಕ್ಷಣ ಕಂಡುಬಂದರೆ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದರು.
ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸುವ ಬಗ್ಗೆ ಮಾರ್ಗಸೂಚಿ ನೀಡಲಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳನ್ನೂ ಅಲ್ಲಿ ನಿಯೋಜಿಸಲಾಗಿದೆ. ಹೊಸ ವೈರಾಣು ಹರಡುವ ವೇಗ ಹೆಚ್ಚಿದೆ ಎಂದು ತಿಳಿದುಬಂದಿದೆ. ಆದರೆ ಇದ ತೀವ್ರತೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದರು.
ಧಾರವಾಡದ ಕಾಲೇಜಿನಲ್ಲಿ ಸಮಾರಂಭ ನಡೆದ ವೇಳೆ ಕೋವಿಡ್ ಹರಡಿದೆ ಎನ್ನಲಾಗಿದೆ. ಸುಮಾರು 2,000 ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 281 ವಿದ್ಯಾರ್ಥಿಗಳ ಮಾದರಿ ಪಾಸಿಟಿವ್ ಆಗಿದೆ. ಇನ್ನೂ ಹಲವರ ಪರೀಕ್ಷಾ ವರದಿ ಇನ್ನೂ ಬರಬೇಕಿದೆ. ಆದರೆ ಪಾಸಿಟಿವ್ ಆದವರಿಗೂ ಹೆಚ್ಚು ತೀವ್ರತೆ ಇಲ್ಲ. ಇದರಲ್ಲಿ ಕೆಲವನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ಗೆ ಕಳುಹಿಸಲಾಗುವುದು. ಡಿಸೆಂಬರ್ ಆರಂಭದಲ್ಲಿ ಈ ಪರೀಕ್ಷಾ ವರದಿ ನಿರೀಕ್ಷಿಸಲಾಗಿದೆ ಎಂದರು.
ರಾಜ್ಯದಲ್ಲಿ 45 ಲಕ್ಷ ಜನರು ಎರಡನೇ ಡೋಸ್ ಪಡೆಯಬೇಕಿದೆ. ಅವರೆಲ್ಲರೂ ಲಸಿಕೆ ಪಡೆಯಬೇಕು. ಲಸಿಕೆ ಪಡೆಯುವ ವಿಚಾರದಲ್ಲಿ ಯಾರೂ ಉದಾಸೀನ ಮಾಡಬಾರದು. ಒಬ್ಬರಿಗೆ ಕೊರೊನಾ ಬಂದರೆ ಅದು ಇಡೀ ಕುಟುಂಬಕ್ಕೆ ಬರುವ ಸಾಧ್ಯತೆ ಇರುವುದರಿಂದ ಮೂರನೇ ಅಲೆ ಬಂದಾಗ ಲಸಿಕೆ ಪಡೆಯದವರಿಗೆ ಸಮಸ್ಯೆಯಾಗಬಹುದು. ದೇಶದಲ್ಲಿ ಮೊದಲ ಡೋಸ್ ಸರಾಸರಿ ಶೇ.80 ಇದ್ದರೆ, ರಾಜ್ಯದಲ್ಲಿ ಶೇ.90 ಕ್ಕೂ ಅಧಿಕವಾಗಿದೆ. ಎರಡನೇ ಡೋಸ್ ನಲ್ಲಿ ದೇಶದ ಸರಾಸರಿ ಶೇ.42-43 ಇದ್ದು, ರಾಜ್ಯದಲ್ಲಿ ಶೇ.57 ಇದೆ. ಜನರು ಸ್ವಯಂಪ್ರೇರಿತರಾಗಿ ಲಸಿಕೆ ಪಡೆಯಬೇಕು ಎಂದರು.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement