ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿ: ಮೂರು ಆನೆಗಳು ಸಾವು

ಚೆನ್ನೈ: ಒಂದು ಹೆಣ್ಣಾನೆ ಅದರ ಎರಡು ಹೆಣ್ಣು ಮರಿಗಳು ರೈಲಿಗೆ ಸಿಲುಕಿ ಮೃತಪಟ್ಟ ಘಟನೆ ತಮಿಳುನಾಡು-ಕೇರಳದ ಗಡಿಯಾದ ನವಕ್ಕರೈ ಸಮೀಪದ ಮಾವುತ್ತಂಪತ್ತಿ ಗ್ರಾಮದ ಬಳಿ ನಡೆದ ಬಗ್ಗೆ ವರದಿಯಾಗಿದೆ.
ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸುಮಾರು 25 ವರ್ಷದ ಹೆಣ್ಣಾನೆ ಹಾಗೂ ಅದರ 12 ವರ್ಷದ ಎರಡು ಮರಿಗಳು ರೈಲು ಹಳಿ ದಾಟುತ್ತಿದ್ದಾಗ ಮಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿಯಾಗಿ ಮೃತಪಟ್ಟಿದೆ. ಮಡುಕ್ಕುರೈ ಬಳಿ ರಾತ್ರಿ 9ರ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ರೈಲು ವೇಗವಾಗಿ ಚಲಿಸುತ್ತಿತ್ತು, ಡಿಕ್ಕಿ ರಭಸಕ್ಕೆ ಆನೆಗಳು ಸ್ಥಳದಲ್ಲೇ ಮೃತಪಟ್ಟಿವೆ. ಸ್ಥಳಕ್ಕೆ ಕಾರ್ಯಾಚರಣೆ ತಂಡ ತೆರಳಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಮೂರು ಹೆಣ್ಣು ಆನೆಗಳು – ವಯಸ್ಕ, ಅರೆವಯಸ್ಕ ಮತ್ತು ಮರಿಯಾನೆ – ಶುಕ್ರವಾರ ರಾತ್ರಿ 9 ಗಂಟೆಯ ಸುಮಾರಿಗೆ ಮಧುಕ್ಕರೈ ಅರಣ್ಯ ವ್ಯಾಪ್ತಿಯ ನವಕ್ಕರೈ ಬಳಿ ರೈಲು ಹಳಿ ದಾಟುತ್ತಿದ್ದವು.
ಈ ಸಮಯದಲ್ಲಿ, ಮಂಗಳೂರಿನಿಂದ ಚೆನ್ನೈಗೆ ಕಾರ್ಯನಿರ್ವಹಿಸುತ್ತಿದ್ದ ರೈಲು ಸಂಖ್ಯೆ 12602 ಚೆನ್ನೈ ಮೇಲ್, ಮರಪ್ಪಲಂ ತೊಟ್ಟಂ ಬಳಿ ಪಾಲಕ್ಕಾಡ್ ರೈಲ್ವೆ ವಿಭಾಗದ ಅಡಿಯಲ್ಲಿ ಬರುವ ವಿಭಾಗದಲ್ಲಿ ಮೂರು ಆನೆಗಳಿಗೆ ಡಿಕ್ಕಿ ಹೊಡೆದಿದೆ. ಆನೆಗಳು ಸ್ಥಳದಲ್ಲೇ ಮೃತಪಟ್ಟಿವೆ.
ಕೊಯಮತ್ತೂರು ಅರಣ್ಯ ವಿಭಾಗದ ಜಿಲ್ಲಾ ಅರಣ್ಯಾಧಿಕಾರಿ ಟಿ.ಕೆ. ಅಶೋಕ್‌ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು. “ಮೂರು ಆನೆಗಳು ಒಂದೇ ಹಿಂಡಿಗೆ ಸೇರಿವೆ” ಎಂದು ಅವರು ಹೇಳಿದರು.
ಮಂಗಳೂರು ಚೆನ್ನೈ ಎಕ್ಸ್‌ಪ್ರೆಸ್‌ ರೈಲು ಕೇರಳದ ಕೋಯಿಕ್ಕೋಡ್ ಹಾಗೂ ಪಾಲಕ್ಕಾಡ್ ಮಾರ್ಗವಾಗಿ ಚೆನ್ನೈಗೆ ತೆರಳುತ್ತದೆ. ಆನೆಗಳು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ. ರಾತ್ರಿ ಕತ್ತಲಿದ್ದರೂ ಆನೆಯ ಮೃತದೇಹಗಳನ್ನು ಹಳಿಯ ಮೇಲಿಂದ ತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆ ಮಾಡಲಾಗುವುದು ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಘಟನೆಯ ಪ್ರಾಥಮಿಕ ತನಿಖೆ ನಡೆಸಲು ಜಿಲ್ಲಾ ಅರಣ್ಯಾಧಿಕಾರಿ ಟಿ.ಕೆ.ಅಶೋಕ್ ಕುಮಾರ್ ಸೇರಿ ಇಲಾಖೆಯ ಇತರ ಉನ್ನತ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ರೈಲಿನ ಲೋಕೋ ಪೈಲಟ್ ನೀಡಿದ ಮಾಹಿತಿ ಅನ್ವಯ ರೈಲ್ವೆ ಪೊಲೀಸರೂ ಕೂಡ ಸ್ಥಳಕ್ಕೆ ತೆರಳಿದ್ದಾರೆ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement