ಕೋವಿಡ್‌ ಪರಿಹಾರ: ಆನ್‌ಲೈನ್‌ ಪೋರ್ಟಲ್‌ ಆರಂಭಿಸಿ ವ್ಯಾಪಕ ಪ್ರಚಾರ ನೀಡಲು ರಾಜ್ಯಗಳಿಗೆ ಸುಪ್ರೀಂಕೋರ್ಟ್ ಸೂಚನೆ

ನವದೆಹಲಿ: ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಹಂಚಿಕೆ ಸುಗಮಗೊಳಿಸುವ ದೃಷ್ಟಿಯಿಂದ ಆನ್‌ಲೈನ್‌ ಪೋರ್ಟಲ್‌ ಆರಂಭಿಸುವಂತೆ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಸೋಮವಾರ ನಿರ್ದೇಶಿಸಿದೆ.
ಕೊರೊನಾ ವೈರಸ್‌ ಸೋಂಕಿಗೆ ಕುಟುಂಬ ಸದಸ್ಯರನ್ನು ಕಳೆದುಕೊಂಡವರು ಪರಿಹಾರ ಪಡೆದುಕೊಳ್ಳಲು ಅವಕಾಶವಾಗುವ ನಿಟ್ಟಿನಲ್ಲಿ ಕೋವಿಡ್‌ ಪರಿಹಾರ ಯೋಜನೆಗೆ ವ್ಯಾಪಕ ಪ್ರಚಾರ ನೀಡುವಂತೆ ನ್ಯಾಯಮೂರ್ತಿಗಳಾದ ಎಂ. ಆರ್‌. ಶಾ ಮತ್ತು ಬಿ. ವಿ. ನಾಗರತ್ನ ನೇತೃತ್ವದ ವಿಭಾಗೀಯ ಪೀಠವು ಹೇಳಿದೆ. ಪರಿಹಾರಕ್ಕಾಗಿ ಸ್ವೀಕೃತಗೊಂಡಿರುವ ಅರ್ಜಿಗಳ ಸಂಖ್ಯೆ ಅತ್ಯಂತ ಕಡಿಮೆ ಎಂದು ಪೀಠವು ಬೇಸರ ವ್ಯಕ್ತಪಡಿಸಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.
ಪರಿಹಾರ ಯೋಜನೆಯ ಕುರಿತು ಸಂಬಂಧಪಟ್ಟ ರಾಜ್ಯಗಳು ವ್ಯಾಪಕ ಪ್ರಚಾರ ನೀಡಿಲ್ಲ ಎಂದು ಭಾವಿಸಬಹುದಾಗಿದೆ” ಎಂದು ಪೀಠವು ಅಸಮಾಧಾನ ಸೂಚಿಸಿತು. ನಿರ್ದಿಷ್ಟವಾಗಿ ಕೇಳಿದರೂ ಪರಿಹಾರ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಆಂಧ್ರ ಪ್ರದೇಶ, ಬಿಹಾರ, ಅಸ್ಸಾಂ, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್‌, ಲಡಾಖ್‌, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ತ್ರಿಪುರ ಮತ್ತು ಮಹಾರಾಷ್ಟ್ರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ, ಯೋಜನೆಗೆ ಪ್ರಚಾರ ನೀಡುವುದರ ಜೊತೆಗೆ ಪರಿಹಾರ ಪಡೆಯಲು ಮನವಿ ಸಲ್ಲಿಸಲು ಮತ್ತು ಪರಿಹಾರ ವಿತರಣೆಗೆ ಪೋರ್ಟಲ್‌ ಆರಂಭಿಸಲಾಗಿದೆಯೇ ಎಂಬುದನ್ನು ಕೇಂದ್ರ ಗೃಹ ಇಲಾಖೆಗೆ ತಿಳಿಸಬೇಕು ಎಂದು ಪೀಠವು ಹೇಳಿದೆ ಎಂದು ವರದಿ ತಿಳಿಸಿದೆ.
ಪರಿಹಾರ ಯೋಜನೆಗೆ ಸಂಬಂಧಿಸಿದಂತೆ ಸ್ಥಿತಿಗತಿ ವರದಿ ನೀಡುವಂತೆ ಮೇಲೆ ತಿಳಿಸಿದ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ನ್ಯಾಯಾಲಯ ಆದೇಶ ಮಾಡಿದೆ. ಪ್ರಕರಣದ ಮೇಲೆ ನಿಗಾ ಇಡುವುದಕ್ಕೆ ಸಂಬಂಧಿಸಿದಂತೆ ಅಮಿಕಸ್‌ ಕ್ಯೂರಿ ನೇಮಿಸುವಂತೆ ಕೋರಿದ್ದ ಅರ್ಜಿದಾರ ವಕೀಲರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. “ಮೆಹ್ತಾ ಅವರು ಸಾಲಿಸಿಟರ್‌ ಜನರಲ್‌ ಹಾಗೂ ನಾಗರಿಕರಾಗಿ ಇದರ ಮೇಲೆ ನಿಗಾ ಇಡಲಿದ್ದಾರೆ” ಎಂದು ನ್ಯಾಯಾಲಯ ಹೇಳಿತು.

ಪ್ರಮುಖ ಸುದ್ದಿ :-   ಪಾಕಿಸ್ತಾನದ 700 ಡ್ರೋನ್, ಕೆಲವು ಜೆಟ್ ಗಳು ಧ್ವಂಸ ; ಭಾರತದ ಎಲ್ಲ ಪೈಲಟ್ ಗಳು ಸುರಕ್ಷಿತ : ಡಿಜಿಎಂಒ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement