ಹುಬ್ಬಳ್ಳಿ: ಕೆಲವೆಡೆ ಹಲವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದು, ಹೀಗಾಗಿ ಲಸಿಕೆ ನೀಡುವವರಿಗೆ ನೂರೆಂಟು ಸವಾಲು ಎದುರಾಗಿದೆ.
ಹುಬ್ಬಳ್ಳಿಯಲ್ಲಿ ಇಂಥದ್ದೊಂದು ಘಟನೆ ನಡೆದ ಬಗ್ಗೆ ವರದಿಯಾಗಿದ್ದು, ವ್ಯಕ್ತಿಯೊಬ್ಬ ಸ್ವತಃ ಜಿಲ್ಲಾಧಿಕಾರಿಗಳೇ ಆಶ್ವಾಸನಾ ಪತ್ರ ನೀಡಿದರೆ ಮಾತ್ರ ಲಸಿಕೆ ಹಾಕಿಸಿಕೊಳ್ಳುವುದಾ ಪಟ್ಟು ಹಿಡಿದ ಘಟನೆ ನಡೆದಿದೆ. ನಂತರ ಜಿಲ್ಲಾಧಿಕಾರಿಗಳು ಆಶ್ವಾಸನಾ ಪತ್ರ ನೀಡಿದ ನಂತರ ಈ ವ್ಯಕ್ತಿ ಲಸಿಕೆ ಹಾಕಿಸಿಕೊಂಡಿದ್ದಾರೆ.
ಈ ಘಟನೆ ಹುಬ್ಬಳ್ಳಿಯ ಮಹಾ ನಗರ ಪಾಲಿಕೆ ಆವರಣದಲ್ಲಿ ನಡೆದಿದೆ. ಭಾನುವಾರ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ನೇತೃತ್ವದಲ್ಲಿ ಲಸಿಕಾಕರಣ ಪ್ರಗತಿ ಪರಿಶೀಲನೆ ಸಭೆ ಹಾಗೂ ಚಿತ್ರಮಂದಿರ, ಮಲ್ಟಿಪ್ಲೆಕ್ಸ್ , ಜಿಮ್ ಮಾಲೀಕರ ಸಭೆ ನಡೆದಿತ್ತು. ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಯಲ್ಲಾಪುರ ಓಣಿ ನಿವಾಸಿ ಆನಂದ ಕೊಣ್ಣೂರಕರ್ ಎಂಬ ವ್ಯಕ್ತಿ ಲಸಿಕೆ ಹಾಕಿಸಿಕೊಂಡರೆ ಅಡ್ಡ ಪರಿಣಾಮವಾಗುತ್ತದೆ ಎಂದು ಲಸಿಕೆ ತೆಗೆದುಕೊಳ್ಳುವುದಿಲ್ಲ ಎಂದು ಹಿಂದೇಟು ಹಾಕಿದ್ದಾರೆ. ಆಗ ಅಲ್ಲಿಯೇ ಇದ್ದ ಜಿಲ್ಲಾಧಿಕಾರಿಗಳು ಲಸಿಕೆ ಹಾಕಿಸಿಕೊಳ್ಳುವುದರಿಂದ ಅಡ್ಡ ಪರಿಣಾಮ ಅಗುವುದಿಲ್ಲ, ಎಲ್ಲರೂ ಲಸಿಕೆ ಪಡೆಯಬೇಕು ಎಂದು ಹೇಳುತ್ತಿದ್ದ ವೇಳೆ, ಆನಂದ ಕೊಣ್ಣೂರಕರ್ ಎಂಬ ವ್ಯಕ್ತಿ ಲಸಿಕೆ ಹಾಕಿಸಿದ ನಂತರ ನನಗೆ ಯಾವುದೇ ರೀತಿ ತೊಂದರೆಯಾದರೆ ಜಿಲ್ಲಾಡಳಿತವೇ ಹೊಣೆ ಹೊರುವುದಾಗಿ ಒಪ್ಪಿಕೊಂಡರೆ ನಾನು ಲಸಿಕೆ ಹಾಕಿಸಿಕೊಳ್ಳುತ್ತೇನೆ, ಅಲ್ಲಿಯವರೆಗೆ ಹಾಕಿಸಿಕೊಳ್ಳುವುದಿಲ್ಲ ಎಂದು ಹೇಳಿದಾಗ ಸ್ವತಃ ಜಿಲ್ಲಾಧಿಕಾರಿಗಳು ಪತ್ರ ಬರೆಯಿಸಿ ಲಸಿಕೆ ನೀಡುವುದರ ಜೊತೆಗೆ ಯಾವ ಅಡ್ಡ ಪರಿಣಾಮವಾಗುವುದಿಲ್ಲ ಎಂಬ ಆಶ್ವಾಸನಾ ಪತ್ರ ನೀಡಿದ್ದಾರೆ. ನಂತರ ವ್ಯಕ್ತಿ ಲಸಿಕೆ ತೆಗೆದುಕೊಂಡಿದ್ದಾರೆ.
ಎರಡು ಡೋಸ್ ಲಸಿಕೆ ಪಡೆಯುವುದರಿಂದ ಮುಂಬರುವ ದಿನಗಳಲ್ಲಿ ಕೊರೊನಾ ವೈರಸ್ನಿಂದಾಗುವ ಪ್ರಾಣ ಹಾನಿಯನ್ನು ತಡೆಯಬಹುದು. ಹಾಗಾಗಿ ಎಲ್ಲರೂ ಲಸಿಕೆ ಪಡೆದುಕೊಳ್ಳುವ ಮೂಲಕ ಜಿಲ್ಲಾಡಳಿತಕ್ಕೆ ಹಾಗೂ ಸರ್ಕಾರಕ್ಕೆ ವೈರಸ್ ತಡೆಯಲು ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಮನವಿ ಮಾಡಿದರು.


ನಿಮ್ಮ ಕಾಮೆಂಟ್ ಬರೆಯಿರಿ