
ಬೆಂಗಳೂರು: ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಪ್ರೊ.ನಿರಂಜನ ವಾನಳ್ಳಿ ನೇಮಕವಾಗಿದ್ದಾರೆ
ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ನಿರಂಜನ ವಾನಳ್ಳಿ ಉತ್ತರ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕ ಮಾಡಿ ರಾಜಭವನದಿಂದ ಅಧಿಸೂಚನೆ ಹೊರಡಿಸಲಾಗಿದೆ.
ಅಧಿಕಾರ ವಹಿಸಿಕೊಂಡ ದಿನದಿಂದ 4 ವರ್ಷಗಳ ಅವಧಿಗೆ ಅವರು ಕುಲಪತಿಯಾಗಿ ಇರಲಿದ್ದಾರೆ.ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆ ವಾನಳ್ಳಿಯ , ಜಿಲ್ಲೆಯ ಶಿರಸಿ ತಾಲೂಕಿನ ವಾನಳ್ಳಿಯವರು.
ಕೋಲಾರದಲ್ಲಿನ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಮೊದಲ ಕುಲಪತಿಯಾಗಿ ಪ್ರೊ.ಟಿ.ಡಿ.ಕೆಂಪರಾಜು 26 ಜುಲೈ, 2017 ರಲ್ಲಿ ನೇಮಕಗೊಂಡಿದ್ದರು. ಅವರ 4 ವರ್ಷಗಳ ಅವಧಿ 2021ರ ಜುಲೈ 25ಕ್ಕೆ ಪೂರ್ಣಗೊಂಡಿತ್ತು. ಬಳಿಕ ಹಿರಿಯ ಡೀನ್ ಡಾ.ಡಿ.ಕುಮುದಾ ಅವರನ್ನು ಪ್ರಭಾರ ಕುಲಪತಿಯನ್ನಾಗಿ ನೇಮಕ ಮಾಡಲಾಗಿತ್ತು.
ಈಗ ಕುಲಪತಿ ಶೋಧನಾ ಸಮಿತಿ ಶಿಫಾರಸ್ಸಿನ ಆಧಾರದ ಮೇರೆಗೆ ಪ್ರಾಧ್ಯಾಪಕ ಪ್ರೊ.ನಿರಂಜನ ವಾನಳ್ಳಿ ಅವರನ್ನು ನೂತನ ಕುಲಪತಿಯಾಗಿ ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ನಿರಂಜನ ವಾನಳ್ಳಿ…
ನಿರಂಜನ ವಾನಳ್ಳಿ ಎರಡು ದಶಕದ ಹಿಂದೆ ನುಡಿ ಚಿತ್ರ ಬರಹಗಳಿಂದ ಪ್ರಸಿದ್ಧರಾದವರು. ಜಡ್ಡಿಗದ್ದೆ ಬಸ್ಸು ಅವರ ಜನಪ್ರಿಯ ಬರಹಗಳಲ್ಲಿ ಒಂದು. ಇಂಥ ಬರಹಗಳ ಸಂಕಲನ ಆಗ ‘ಸೋಡಿಗದ್ದೆ ಚೆಲುವೆಯರು’ ಹೆಸರಿನಲ್ಲಿ ಪುಸ್ತಕ ರೂಪ ಪಡೆದಿತ್ತು.
ಆಗ ಸಕ್ರಿಯವಾಗಿದ್ದ ಬಕುಲ ಸಾಹಿತ್ಯ ಪ್ರಕಾಶನ ನಿರಂಜನ ವಾನಳ್ಳಿ ಅವರ ಮೊದಲನೆಯದಾದ ಈ ಪುಸ್ತಕ ಪ್ರಕಟಿಸಿದ್ದು.
ನಿರಂಜನ ವಾನಳ್ಳಿ ಅವರು ದಕ್ಷಿಣ ಕನ್ನಡದ ಉಜಿರೆ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಾಗಿದ್ದರು.
ಅವರು ಹಿರಿಯ ಸಾಮಾಜಿಕ ಕಾರ್ಯಕರ್ತ ಡಾ.ಎಸ್ ಜಿ ಹೆಗಡೆ ಅವರ ಪುತ್ರ.


ನಿಮ್ಮ ಕಾಮೆಂಟ್ ಬರೆಯಿರಿ