
ಮುಂಬೈ: ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ, ವಕೀಲರಾದ ಸುಧಾ ಭಾರದ್ವಾಜ್ ಅವರು ಸಲ್ಲಿಸಿದ್ದ ಡಿಫಾಲ್ಟ್ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ಬುಧವಾರ ಅಂಗೀಕರಿಸಿದೆ.
ಜಾಮೀನು ಷರತ್ತುಗಳಿಗಾಗಿ ಎನ್‌ಐಎ ವಿಶೇಷ ನ್ಯಾಯಾಲಯ ಸಂಪರ್ಕಿಸುವಂತೆ ಭಾರದ್ವಾಜ್ ಅವರಿಗೆ ಹೈಕೋರ್ಟ್ ಸೂಚಿಸಿದೆ. ಇದೇ ವೇಳೆ ಎಂಟು ಆರೋಪಿಗಳಾದ ಪಿ. ವರವರ ರಾವ್, ಸುಧೀರ್ ಧವಳೆ, ರೋನಾ ವಿಲ್ಸನ್, ಸುರೇಂದ್ರ ಗಾಡ್ಲಿಂಗ್, ಶೋಮಾ ಸೇನ್, ಮಹೇಶ್ ರಾವುತ್, ವೆರ್ನನ್ ಗೊನ್ಸಾಲ್ವೆಸ್ ಮತ್ತು ಅರುಣ್ ಫೆರೆರಾ ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿಗಳಾದ ಎಸ್. ಎಸ್. ಶಿಂಧೆ ಮತ್ತು ಎನ್. ಜೆ. ಜಾಮ್‌ದಾರ್ ಅವರಿದ್ದ ಪೀಠ ತಿರಸ್ಕರಿಸಿದೆ.
ಸುಧಾ ಭಾರದ್ವಾಜ ಅವರು ಆಗಸ್ಟ್ 2018ರಿಂದ ಜೈಲಿನಲ್ಲಿದ್ದು ಅವರನ್ನು ದೆಹಲಿಯಲ್ಲಿ ಬಂಧಿಸಿ ಮುಂಬೈಗೆ ಕರೆದೊಯ್ಯಲಾಗಿತ್ತು. ಛತ್ತೀಸ್‌ಗಢದಲ್ಲಿ ಬುಡಕಟ್ಟು ಸಮುದಾಯ ಹಾಗೂ ಇತರರ ಹಕ್ಕುಗಳಿಗಾಗಿ ಕೆಲಸ ಮಾಡಿದ ಸುಧಾ ಅವರು ತಮ್ಮ ಬಂಧನ ನಡೆದಾಗ ದೆಹಲಿಯ ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿ ಕೆಲಸ ಮಾಡುತ್ತಿದ್ದರು.
ಪುಣೆಯ ಸೆಷನ್ಸ್ ನ್ಯಾಯಾಧೀಶರಾದ ಕೆ ಡಿ ವದನೆ ಮತ್ತು ಆರ್ ಎಂ ಪಾಂಡೆ ಅವರು ಪ್ರಕರಣದಲ್ಲಿ ಆದೇಶಗಳನ್ನು ಹೊರಡಿಸಲು ಯಾವುದೇ ಅಧಿಕಾರ ವ್ಯಾಪ್ತಿ ಹೊಂದಿಲ್ಲ ಎಂಬ ಕಾರಣಕ್ಕಾಗಿ ಅಪರಾಧ ಪ್ರಕ್ರಿಯಾ ಸಂಹಿತೆಯಡಿಯಲ್ಲಿ ಸುಧಾ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಾಲಯ ಜಾಮೀನು ನೀಡಿತು.
ಆರೋಪಪಟ್ಟಿ ಪರಿಗಣಿಸಿ ಸಿಆರ್‌ಪಿಸಿ ಸೆಕ್ಷನ್ 167 (2)ರ ಅಡಿ ಡಿಫಾಲ್ಟ್ ಜಾಮೀನು ಅರ್ಜಿ ತಿರಸ್ಕರಿಸಿದ್ದ ನ್ಯಾ. ಪಾಂಡೆ ಅವರ ಆದೇಶವನ್ನು ಪ್ರಶ್ನಿಸಿ ಸುಧೀರ್ ಧವಳೆ, ರೋನಾ ವಿಲ್ಸನ್, ಸುರೇಂದ್ರ ಗಾಡ್ಲಿಂಗ್, ಶೋಮಾ ಸೇನ್, ಮಹೇಶ್ ರಾವುತ್, ಪಿ ವರವರ ರಾವ್, ವೆರ್ನಾನ್ ಗೊನ್ಸಾಲ್ವೆಸ್ ಮತ್ತು ಅರುಣ್ ಫೆರೇರಾ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತು.
ಮಾವೋವಾದಿ ಸಂಪರ್ಕ ಹೊಂದಿರುವ ಎಡಪಂಥೀಯ ಗುಂಪುಗಳ ವಿರುದ್ಧ ಜನವರಿ 8, 2018 ರಂದು ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದರು. ಇದು ಭೀಮಾ ಕೋರೆಗಾಂವ್ ಪ್ರಕರಣದ ತಳಹದಿಯಾಗಿದ್ದು 16 ಆರೋಪಿಗಳನ್ನು ಬಂಧಿಸಿ 3 ಆರೋಪಪಟ್ಟಿಗಳನ್ನು ಸಲ್ಲಿಸಲು ಕಾರಣವಾಯಿತು. ಪ್ರಕರಣದ ವಿಚಾರಣೆ ಇನ್ನಷ್ಟೇ ಆರಂಭವಾಗಬೇಕಿದೆ



ನಿಮ್ಮ ಕಾಮೆಂಟ್ ಬರೆಯಿರಿ