ಮಣಿಪಾಲ: ಗಾಯಗೊಂಡ ಗೋರಕ್ಷಕರ ಆರೋಗ್ಯ ವಿಚಾರಿಸಿದ ಗೃಹ ಸಚಿವರು

ಉಡುಪಿ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕೂಳೂರಿನಲ್ಲಿ ಗೋರಕ್ಷಕರ ಮೇಲೆ ವಾಹನ ಹತ್ತಿಸಿದ್ದರಿಂದ ಗಾಯಗೊಂಡ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಗಾಯಾಳುಗಳ ಆರೋಗ್ಯವನ್ನು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ ವಿಚಾರಿಸಿದ್ದಾರೆ. ಕೆಎಂಸಿ ಆಸ್ಪತ್ರೆಯ ವೈದ್ಯರ ಜೊತೆ ಸಮಾಲೋಚನೆ ನಡೆಸಿದ್ದಾರೆ.
ಗೃಹ ಸಚಿವರ ತವರು ಕ್ಷೇತ್ರದಲ್ಲಿ ಅಕ್ರಮ ಗೋಸಾಗಣೆ ಪತ್ತೆ ಆಗಿತ್ತು.ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಳಗಿ ಗ್ರಾಮದಿಂದ ಸುಮಾರು 20 ಕಿ.ಮೀ.ವರೆಗೆ ಯುವಕರು ಅಕ್ರಮ ಗೋ ಸಾಗಾಟ ಮಾಡುತ್ತಿದ್ದ ವಾಹನದ ಬೆನ್ಹತ್ತಿದ್ದರು. ಈ ವೇಳೆ ಹಿಂಬಾಲಿಸಿದ ಚರಣ್ ಮತ್ತು ಕಿರಣ್ ಮೇಲೆ ದುಷ್ಕರ್ಮಿಗಳು ಮಿನಿ ಲಾರಿ ಹತ್ತಿಸಿದ್ದರು. ಗಂಭೀರವಾಗಿ ಗಾಯಗೊಂಡ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ತೀರ್ಥಹಳ್ಳಿ ಆಸ್ಪತ್ರೆಗೆ ಗಾಯಾಳುಗಳು ದಾಖಲಾಗಿದ್ದಾಗ ಗೃಹಸಚಿವ ಆರಗ ಜ್ಞಾನೇಂದ್ರ ಆರೋಗ್ಯ ವಿಚಾರಿಸಿದ್ದರು. ಯುವಕರ ಚಿಕಿತ್ಸಾ ವೆಚ್ಚಕ್ಕೆ 35 ಸಾವಿರ ರೂ. ಧನ ಸಹಾಯ ಮಾಡಿದ್ದರು.
ಮಾಳೂರು ಪೊಲೀಸರು ಅಕ್ರಮ ಗೋಸಾಗಣೆ ವಾಹನ ಜಪ್ತಿ ಮಾಡಿದ್ದು, ಇಬ್ಬರು ಆರೋಪಿಗಳ ಬಂಧಿಸಲಾಗಿದೆ. ಮತ್ತೊಬ್ಬ ಪರಾರಿಯಾಗಿದ್ದಾನೆ. ಮಿನಿ ಲಾರಿಯಲ್ಲಿ 3 ಹಸು, 2 ಎಮ್ಮೆ ಇತ್ತು ಎಂದು ತಿಳಿದುಬಂದಿದೆ. ಜಾನುವಾರುಗಳನ್ನು ಪೊಲೀಸರು ರಕ್ಷಿಸಿದ್ದಾರೆ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement