ಕರ್ನಾಟಕದಲ್ಲಿ ಓಮಿಕ್ರಾನ್ ಸೋಂಕು ಪತ್ತೆ: ಇಂದು ಗೃಹಕಚೇರಿಯಲ್ಲಿ ತುರ್ತು ಸಭೆ ಕರೆದ ಸಿಎಂ ಬೊಮ್ಮಾಯಿ

ಬೆಂಗಳೂರು : ಕರ್ನಾಟಕದಲ್ಲಿ ಇಬ್ಬರಿಗೆ ಓಮಿಕ್ರಾನ್‌ (Omicron) ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುರ್ತು ಸಭೆ ಕರೆದಿದ್ದು, ಶುಕ್ರವಾರ (ನ.3) ಮಧ್ಯಾಹ್ನ 1 ಗಂಟೆಗೆ ಗೃಹಕಚೇರಿ ಕೃಷ್ಣಾದಲ್ಲಿ ನಡೆಯಲಿದೆ.
ಆರೋಗ್ಯ ಸಚಿವರು, ಕಂದಾಯ ಸಚಿವರು, ಮುಖ್ಯ ಕಾರ್ಯದರ್ಶಿ, ಅಭಿವೃದ್ಧಿ ಆಯುಕ್ತರು, ಬಿಬಿಎಂಪಿ ಮುಖ್ಯ ಆಯುಕ್ತರು, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ವಿಪತ್ತು ನಿರ್ವಹಣಾ ಇಲಾಖೆ ಪ್ರಧಾನ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಕೆಐಎಬಿ ಕೊವಿಡ್ ನೋಡಲ್ ಅಧಿಕಾರಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕರು, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರ ಹಾಜರಿರುವಂತೆ ಸೂಚನೆ ನೀಡಲಾಗಿದೆ ಹಾಗೂ ಸಭೆಯಲ್ಲಿ ಕೊವಿಡ್ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೂ ಹಾಜರಿರುವಂತೆ ಸೂಚಿಸಲಾಗಿದೆ.
ಕೊವಿಡ್ ಎದುರಿಸಿದ ರೀತಿ ಒಮಿಕ್ರಾನ್ ನಿಭಾಯಿಸುತ್ತೇವೆ: ಸಿಎಂ
ಕರ್ನಾಟಕದ ಇಬ್ಬರಿಗೆ ಓಮಿಕ್ರಾನ್ ರೂಪಾಂತರದ ಸೋಂಕು ದೃಢಪಟ್ಟಿರುವ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕೊವಿಡ್ ಎದುರಿಸಿದ ರೀತಿಯಲ್ಲಿಯೇ ಓಮಿಕ್ರಾನ್ ಪರಿಸ್ಥಿತಿಯನ್ನೂ ನಿಭಾಯಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಆರೋಗ್ಯ ಸಚಿವರೊಂದಿಗೆ ಈ ಕುರಿತು ಸ್ವತಃ ಚರ್ಚಿಸಿದ್ದೇನೆ. ಬೆಂಗಳೂರಿಗೆ ಹಿಂದಿರುಗಿದ ತಜ್ಞರ ಜತೆ ತುರ್ತು ಸಭೆ ಮಾಡಿ ಚರ್ಚೆ ನಡೆಸುತ್ತೇನೆ. ನಂತರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ. ಕರ್ನಾಟಕದ ಓಮಿಕ್ರಾನ್ ಸ್ಥಿತಿಗತಿಯ ಬಗ್ಗೆ ನಾಳೆ ಸಂಪೂರ್ಣ ವಿವರ ನೀಡಲಾಗುತ್ತದೆ. ಆರೋಗ್ಯ ಸಚಿವರು ಮತ್ತು ಮುಖ್ಯ ಕಾರ್ಯದರ್ಶಿಯೊಂದಿಗೆ ನಾನು ಚರ್ಚಿಸಿದೆ. ಕೇಂದ್ರ ಸರ್ಕಾರದಿಂದ ಅಗತ್ಯ ಮಾಹಿತಿ ಪಡೆಯಲು ಸೂಚಿಸಿದ್ದೇನೆ. ನಾಳೆ (ನ.3) ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನಲ್ಲಿ ತಜ್ಞರ ಜತೆ ತುರ್ತು ಸಭೆ ನಡೆಯಲಿದೆ. ಹೈರಿಸ್ಕ್ ದೇಶಗಳ ಪ್ರಯಾಣಿಕರಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು. ವಿಮಾನ ನಿಲ್ದಾಣಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರದ ಪ್ರಮುಖರು ಮತ್ತು ತಜ್ಞರ ಜೊತೆ ಈ ಸಂಬಂಧ ಚರ್ಚೆ ಮಾಡಬೇಕಿದೆ. ಪೂರ್ಣ ವರದಿ ಬಂದ ಬಳಿಕ ಪರಿಸ್ಥಿತಿಯ ಯಥಾಸ್ಥಿತಿಯ ಬಗ್ಗೆ ಸಮಗ್ರ ಮಾಹಿತಿ ಲಭ್ಯವಾಗಲಿದೆ. ವಿಮಾನ ನಿಲ್ದಾಣಗಳಲ್ಲಿ ಸೋಂಕಿತರ ತಪಾಸಣೆ ಮತ್ತು ಕ್ವಾರಂಟೈನ್ ಬಗ್ಗೆ ತಜ್ಞರ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗುತ್ತದೆ ಎಂದರು. .

ಪ್ರಮುಖ ಸುದ್ದಿ :-   ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement