
ಚಂಡೀಗಢ: ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಶುಕ್ರವಾರ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಮತ್ತು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.
ಕಾಂಗ್ರೆಸ್ ಸೇರುವ ಮುನ್ನ ಮೂಸ್ ವಾಲಾ ಎರಡು ವಾರಗಳ ಹಿಂದೆ ತಮ್ಮ ‘ಸೆಟಿಸ್ಫೈ ಎಂಬ ಅಲ್ಬಂ ಬಿಡುಗಡೆ ಮಾಡಿದ್ದರು. ಮೂಸೆವಾಲಾ ಅವರ ತಂದೆ ನಿವೃತ್ತ ಸರ್ಕಾರಿ ನೌಕರ ಮತ್ತು ರೈತ.
ಕಾಂಗ್ರೆಸ್‌ಗೆ ಸೇರಿದ ನಂತರ ಮಾತನಾಡಿದ ಮೂಸೆವಾಲಾ ನಾಲ್ಕು ವರ್ಷಗಳ ಹಿಂದೆ ನಾನು ಸಂಗೀತ ವೃತ್ತಿಜೀವನ ಪ್ರಾರಂಭಿಸಿದ್ದೆ. ನಾನು ಈಗಲೂ ನನ್ನ ಹಳ್ಳಿಯ ಅದೇ ಮನೆಯಲ್ಲಿ ಇದ್ದೇನೆ. ನನ್ನ ತಂದೆ ಮಾಜಿ ಸೈನಿಕ ಮತ್ತು ನನ್ನ ತಾಯಿ ಸರಪಂಚ್. ನಾನು ಸ್ಥಾನಮಾನಕ್ಕಾಗಿ ಅಥವಾ ಪ್ರಶಂಸೆಗಾಗಿ ರಾಜಕೀಯಕ್ಕೆ ಬರುತ್ತಿಲ್ಲ. ವ್ಯವಸ್ಥೆಯನ್ನು ಪರಿವರ್ತಿಸಲು ಅದರ ಭಾಗವಾಗಲು ಬಯಸುತ್ತೇನೆ. ಜನರ ದನಿ ಎತ್ತಲು ಕಾಂಗ್ರೆಸ್ ಸೇರುತ್ತಿದ್ದೇನೆ. ಕಾಂಗ್ರೆಸ್‌ನಲ್ಲಿ ಸಾಮಾನ್ಯ ಕುಟುಂಬದಿಂದ ಬಂದ ನಾಯಕರು ಇರುವುದರಿಂದ ಕಾಂಗ್ರೆಸ್ ಸೇರುತ್ತಿದ್ದೇನೆ ಎಂದ ಅವರು ಕ್ಯಾಬಿನೆಟ್ ಸಚಿವ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಸಾಮಾನ್ಯ ಕುಟುಂಬದಿಂದ ಬಂದಿದ್ದಾರೆ ಎಂದು ಉದಾಹರಿಸಿದರು.
ಮೂಸೆವಾಲಾ ಕಾಂಗ್ರೆಸ್‌ಗೆ ಸೇರ್ಪಡೆಯಾಘಿದ್ದು ರಾಜ್ಯದ ರಾಜಕೀಯ ಕ್ಷೇತ್ರದಲ್ಲಿ ದೊಡ್ಡ ದಿನ” ಎಂದು ಪಂಜಾಬ್ ಮುಖ್ಯಮಂತ್ರಿ ಚನ್ನಿ ಹೇಳಿದರು.
ಮೂಸೆವಾಲಾ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಸಿಧು ನಾವು ಸಿಧು ಮೂಸೆವಾಲಾ ಅವರನ್ನು ಪಕ್ಷಕ್ಕೆ ತೆಗೆದುಕೊಳ್ಳುತ್ತಿದ್ದೇವೆ. ಅವರು ನಮಗಾಗಿ ಚುನಾವಣೆಯಲ್ಲಿ ಹೋರಾಡುತ್ತಾರೆ ಎಂದು ಹೇಳಿದರು.
ಎಐಸಿಸಿ ಕಾರ್ಯದರ್ಶಿ ಹರೀಶ್ ಚೌಧರಿ ಮೂಸೆವಾಲಾರನ್ನು ಸ್ವಾಗತಿಸಿ, ರೈತರು ಆಂದೋಲನ ನಡೆಸುತ್ತಿದ್ದಾಗ ಮೂಸೆವಾಲಾ ಅವರದ್ದು ಪ್ರಬಲ ದನಿಯಾಗಿತ್ತು ಎಂದರು.
ಮೂಸೆವಾಲಾ ಅವರ ಹಾಡೊಂದರಲ್ಲಿ ಹಿಂಸಾಚಾರ ಮತ್ತು ಬಂದೂಕು ಸಂಸ್ಕೃತಿಯನ್ನು ಉತ್ತೇಜಿಸಿದ ಆರೋಪದ ಮೇಲೆ ಶಸ್ತ್ರಾಸ್ತ್ರ ಕಾಯ್ದೆಯಡಿ ಕಳೆದ ವರ್ಷ ಪಂಜಾಬ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ಕೊವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಫೈರಿಂಗ್ ರೇಂಜ್‌ನಲ್ಲಿ ಎಕೆ 47 ರೈಫಲ್‌ನಿಂದ ಗುಂಡು ಹಾರಿಸಿದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಅವರ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಲಾಗಿತ್ತು.



ನಿಮ್ಮ ಕಾಮೆಂಟ್ ಬರೆಯಿರಿ