ಐವರು ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ

ಕೋಟಾ(ರಾಜಸ್ಥಾನ): ರಾಜಸ್ಥಾನದ ಕೋಟಾದಲ್ಲಿ ನಡೆದ ದುರಂತ ಘಟನೆಯಲ್ಲಿ ತಾಯಿಯೊಬ್ಬಳು ತನ್ನ ಐವರು ಅಪ್ರಾಪ್ತ ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಹಾರಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಘಟನೆ ರಾಜ್ಯದ ಕೋಟಾ ಜಿಲ್ಲೆಯ ಚೆಚಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಯಾಖೇಡಿ ಗ್ರಾಮದಲ್ಲಿ ನಡೆದಿದೆ. ಇಂದು ಬೆಳಗ್ಗೆ ಗ್ರಾಮಸ್ಥರು ಆರು ಶವಗಳನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ತಾಯಿ ಹಾಗೂ ಐವರು ಪುತ್ರಿಯರ ಮೃತದೇಹಗಳನ್ನು ಬಾವಿಯಿಂದ ಹೊರತೆಗೆಯಲಾಗಿದೆ. ಘಟನೆಯ ನಂತರ ಇಡೀ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.
ಪತಿಯೊಂದಿಗೆ ಕಲಹ ಘಟನೆಗೆ ಪ್ರಾಥಮಿಕ ಕಾರಣ ಎಂದು ಹೇಳಲಾಗುತ್ತಿದೆ ಎಂದು ಕೋಟಾ ಜಿಲ್ಲಾ ಗ್ರಾಮಾಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪಾರಸ್ ಜೈನ್ ತಿಳಿಸಿದ್ದಾರೆ. ಶನಿವಾರ ರಾತ್ರಿ ಅಥವಾ ಭಾನುವಾರ ಮುಂಜಾನೆ ತಾಯಿ ತನ್ನ ಐದು ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಹಾರಿದ್ದಾಳೆ. ನೀರಿನಲ್ಲಿ ಮುಳುಗಿ ಎಲ್ಲರೂ ಮೃತಪಟ್ಟಿದ್ದಾರೆ. ಕೋಟಾ ಜಿಲ್ಲಾ ಗ್ರಾಮಾಂತರ ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ.
ಮೃತ ತಾಯಿಯನ್ನು ಬಾದಮ್ ಬಾಯಿ ( 45 ವರ್ಷ) ಎಂದು ಗುರುತಿಸಲಾಗಿದ್ದು, 14 ವರ್ಷದ ಮಗಳು ಸಾವಿತ್ರಿ, 7 ವರ್ಷದ ಅಂಜಲಿ, 5 ವರ್ಷದ ಕಾಜಲ್, 3 ವರ್ಷದ ಗುಂಜನ್ ಮತ್ತು 1 ವರ್ಷದ ಮಗಳು ರಚನಾ ಮೃತಪಟ್ಟ ಅಪ್ರಾಪ್ತ ಹೆಣ್ಣುಮಕ್ಕಳು. ಎಲ್ಲರ ಮೃತದೇಹಗಳನ್ನು ಪೊಲೀಸರು ಬಾವಿಯಿಂದ ಹೊರತೆಗೆದಿದ್ದಾರೆ. ಬ್ಬರು ಪುತ್ರಿಯರಾದ ಗಾಯತ್ರಿ ಮತ್ತು ಪೂನಂ ಅವರು ಘಟನೆಯ ಸಮಯದಲ್ಲಿ ಮನೆಯಿಂದ ಹೊರಗಿದ್ದರು.ಹೀಗಾಗಿ ಅವರು ಬಚಾವ್‌ ಆಗಿದ್ದಾರೆ. ಪೊಲೀಸರು ಪ್ರತಿಯೊಂದು ಕೋನದಿಂದ ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ...| ಬೈಕ್​ಗೆ ಡಿಕ್ಕಿ ಹೊಡೆದ ನಂತ್ರ ದೂರ ಎಳೆದೊಯ್ದ ಲಾರಿ..: ಟ್ರಕ್‌ ಹಿಡಿದುಕೊಂಡು ನೇತಾಡುತ್ತಿದ್ದ ಸವಾರ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement