ಮಂಗಳೂರು: 9 ಮಕ್ಕಳನ್ನು ಹೆತ್ತಿದ್ದರೂ ಈ ತಾಯಿಯ ಜೀವನ ಸಂಧ್ಯಾ ಕಾಲದಲ್ಲಿ ಯಾವೊಬ್ಬ ಮಕ್ಕಳೂ ಸಲಹದೆ ತಾಯಿಯನ್ನು ಒಬ್ಬಂಟಿಯಾಗಿಸಿದ್ದಾರೆ..!.
ಈ 85 ವಯಸ್ಸಿನ ವೃದ್ಧೆಗೆ 9 ಮಂದಿ ಮಕ್ಕಳಿದ್ದಾರೆ. ಆದರೆ ತಾಯಿ ಎಲ್ಲರಿಗೂ ಭಾರ, ಯಾರಿಗೂ ಬೇಡವಾಗಿದ್ದಾಳೆ. ಮಕ್ಕಳ ಮನೆಯಲ್ಲಿ ಉಳಿಯಲು ತನಗೆ ಅವಕಾಶ ಕಲ್ಪಿಸಿ ಕೊಡುವಂತೆ ಪಾಂಡೇಶ್ವರ ಠಾಣೆ ಹಿರಿಯ ನಾಗರಿಕರ ಸಹಾಯವಾಣಿ ಕದ ತಟ್ಟಿದ್ದಾರೆ ಈ ವೃದ್ಧೆ ತಾಯಿ.
ಈ ವೃದ್ಧೆಯ ಹೆಸರು ಸುಬ್ಬಲಕ್ಷ್ಮೀ. ಈ ವೃದ್ಧೆ ತಮ್ಮ ಮಕ್ಕಳ ಮನೆಯಲ್ಲಿ ಉಳಿದುಕೊಳ್ಳಲು ಅವಕಾಶ ಕೊಡುವಂತೆ ಪಾಂಡೇಶ್ವರ ಪೊಲೀಸ್ ಠಾಣಾ ಹಿರಿಯ ನಾಗರಿಕರ ಸಹಯವಾಣಿಗೆ ಕರೆ ಮಾಡಿದ್ದಾರೆ.
ಸುಬ್ಬಲಕ್ಷ್ಮೀ ಅವರಿಗೆ ಐದು ಮಂದಿ ಪುತ್ರಿಯರು, 5 ಮಂದಿ ಪುತ್ರರು, ಅವರಲ್ಲಿ ಒಬ್ಬ ಮಗ ಮೃತಪಟ್ಟಿದ್ದಾರೆ. ತಿಂಗಳಿಗೆ ಒಬ್ಬರ ಮನೆಯಲ್ಲಿ ಉಳಿಬೇಕು ಎನ್ನುವ ಆಸೆ ಈ ತಾಯಿಯದ್ದು. ತೊಕ್ಕೊಟ್ಟು ಕಾಪಿಕಾಡಿನಲ್ಲಿ ಇರುವ ಪುತ್ರನ ಮನೆಯಲ್ಲಿದ್ದ ಸುಬ್ಬಲಕ್ಷ್ಮೀ ಅವರನ್ನು ಮೂರು ತಿಂಗಳ ಹಿಂದೆಯೇ ದೂರದ ಸಂಬಂಧಿ ಮನೆಗೆ ಕಳುಹಿಸಲಾಗಿದೆ. ಆದರ ನಂತರ ಯಾರೂ ಕೂಡ ಅಲ್ಲಿಂದ ಸುಬ್ಬಲಕ್ಷ್ಮೀ ಕರೆದುಕೊಂಡು ಹೋಗಿಲ್ಲ ಎಂದು ಸುಬ್ಬಲಕ್ಷ್ಮೀ ಹೇಳಿದ್ದಾರೆ.
ಅಕ್ಕರೆಯಿಂದ ಪಾಲನೆ ಮಾಡಿದ ಹೆಣ್ಣುಮಕ್ಕಳ ಮನೆಗೆ ಹೋಗುವುದಕ್ಕೆ ಸುಬ್ಬಲಕ್ಷ್ಮೀ ಅವರು ಮನಸ್ಸು ಒಪ್ಪುತ್ತಿಲ್ಲ. ಗಂಡು ಮಕ್ಕಳು ಬಂದು ಮನೆಗೆ ಕರೆದುಕೊಂಡು ಹೋಗುತ್ತಾರೆ ಎಂಬ ಆಸೆಯ ಕಣ್ಣುಗಳಿಂದ ದಾರಿ ನೋಡುತ್ತಿರುವ ಈ ತಾಯಿ ನೆರವಿಗೆ ಯಾರೂ ಬಂದಿಲ್ಲ, ಸಂಪರ್ಕಕ್ಕೂ ಸಿಗುತ್ತಿಲ್ಲ. ಒಂಬತ್ತು ಮಂದಿ ಮಕ್ಕಳಿದ್ದರೂ ಆಶ್ರಯ ಸಿಗದೆ ಜೀವನದ ಸಂಧ್ಯಾ ಕಾಲದಲ್ಲಿ ಸುಬ್ಬಲಕ್ಷ್ಮೀ ಅವರು ಕಂಗಾಲಾಗಿದ್ದಾರೆ. ಕೊನೆಗೆ ಏನು ಮಾಬೇಕೆMದು ತೋಚದೆ ಹಿರಿಯ ನಾಗರಿಕ ಸಹಾಯವಾಣಿಗೆ ಕರೆ ಮಾಡಿದ್ದಾರೆ.
ದೂರಿಗೆ ಸ್ಪಂದಿಸಿದ ಠಾಣಾ ನಿರೀಕ್ಷಕಿ ರೇವತಿ ಸಹಾಯವಾಣಿ ಸಂಯೋಜಕರ ತಂಡದ ಮೂಲಕ ಪುತ್ರರನ್ನು ಸಂಪರ್ಕಿಸಿ ಅವರಿಗೆ ಸ್ಪಂದಿಸಲು ಎರಡು ವಾರಗಳ ಸಮಯ ನೀಡಿದ್ದರು. . ಆದರೆ, ಯಾವ ಮಕ್ಕಳು ಕೂಡ ಸುಬ್ಬಲಕ್ಷ್ಮೀ ಅವರನ್ನು ಕರೆದುಕೊಂಡು ಹೋಗಲು ಮನಸ್ಸು ಮಾಡದ ಹಿನ್ನೆಲೆಯಲ್ಲಿ ಶನಿವಾರ ಪೊಲೀಸರ ಸಹಕಾರದೊಂದಿಗೆ ಸುಬ್ಬುಲಕ್ಷ್ಮಿ ಅವರನ್ನು ತೊಕ್ಕೊಟ್ಟು ಕಾಪಿಕಾಡು ಬಳಿ ಮಗನ ಮನೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಮನೆಗೆ ಬೀಗ ಹಾಕಲಾಗಿತ್ತು ಎನ್ನಲಾಗಿದೆ.
ದೂರವಾಣಿ ಮೂಲಕ ಸಂಪರ್ಕಿಸಿದಾಗ ಪೊಲೀಸರು ಹಾಗೂ ಸಹಾಯವಾಣಿ ಸಿಬ್ಬಂದಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರಂತೆ. ಹೀಗಾಗಿ ಸುಬ್ಬಲಕ್ಷ್ಮಿ ಅವರನ್ನು ವಾಪಸ್ ಕರೆತರಲಾಗಿದೆ. ಅಲ್ಲದೆ, ಠಾಣೆಗೆ ಕರೆಸಿ ಮಾತುಕತೆ ನಡೆಸುವ ತೀರ್ಮಾನಕ್ಕೆ ಮುಂದಾಗಿದ್ದು, ಆಗ ಕೂಡ ಯಾರೂ ಕರೆದುಕೊಂಡು ಹೋಗದಿದ್ದಲ್ಲಿ ಕಾನೂನು ರೀತಿ ದೂರು ದಾಖಲಿಸಿ, ಉಪ ವಿಭಾಗಾಧಿಕಾರಿ ನೇತೃತ್ವದ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ