ನವದೆಹಲಿ: ತಮಿಳುನಾಡಿನ ಕುನೂರ್ನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸೇನಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಅಂತ್ಯಕ್ರಿಯೆ ನಾಡಿದ್ದು ಶುಕ್ರವಾರ(ಡಿಸೆಂಬರ್ 10) ದೆಹಲಿ ಕಂಟೋನ್ಮೆಂಟ್ ಪ್ರದೇಶದಲ್ಲಿ ನಡೆಯಲಿದೆ.
ನಾಳೆ, ಗುರುವಾರ (ಡಿಸೆಂಬರ್ 9) ಸಂಜೆ ಬಿಪಿನ್ ರಾವತ್ ಹಾಗೂ ಪತ್ನಿ ಮಧುಲಿಕಾ ಪಾರ್ಥಿವ ಶರೀರವನ್ನು ದೆಹಲಿಗೆ ಒಯ್ಯಲಾಗುತ್ತದೆ. ನಾಡಿದ್ದು ಬೆಳಗ್ಗೆ 11ರಿಂದ ಮಧ್ಯಾಹ್ನ 2ರ ವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗುವ ಬಗ್ಗೆ ಮಾಹಿತಿ ನೀಡಲಾಗಿದೆ. ಬಳಿಕ ಮೆರವಣಿಗೆಯ ಮೂಲಕ ಪಾರ್ಥಿವ ಶರೀರ ಸ್ಥಳಾಂತರ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಬಿಪಿನ್ ನಿವಾಸ ಕಾಮರಾಜ್ ಮಾರ್ಗದಿಂದ ಮೆರವಣಿಗೆ ಶುರುವಾಗಲಿದ್ದು, ಬ್ರಾರ್ ಸ್ಕ್ವೇರ್ ಸ್ಮಶಾನದವರೆಗೆ ಮೆರವಣಿಗೆ ನಡೆಯಲಿದ್ದು, ಸಂಜೆ ಬ್ರಾರ್ ಸ್ಕ್ವೇರ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಹೆಲಿಕಾಪ್ಟರ್ ದುರಂತದ ಬಗ್ಗೆ ಸಂಸತ್ನಲ್ಲಿ ನಾಳೆ ವಿವರಣೆ ನೀಡಲಾಗುತ್ತದೆ. ಲೋಕಸಭೆ, ರಾಜ್ಯಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಘಟನೆಯ ಬಗ್ಗೆ ವಿವರಣೆ ನೀಡಲಿದ್ದಾರೆ. ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ ಹಿನ್ನೆಲೆಯಲ್ಲಿ ಉತ್ತರಾಖಂಡ್ನಲ್ಲಿ ಮೂರು ದಿನಗಳ ಕಾಲ ಶೋಕಾಚಾರಣೆ ಘೋಷಣೆ ಮಾಡಲಾಗಿದೆ. ಉತ್ತರಾಖಂಡ್ನ ಪೌರಿಯಲ್ಲಿ ಬಿಪಿನ್ ರಾವತ್ ಜನ್ಮಸ್ಥಳವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ