ಮೂವರನ್ನ ಗುಂಡಿಕ್ಕಿ ಕೊಂದಿದ್ದ ಯೋಧನಿಗೆ 24 ವರ್ಷ ಶಿಕ್ಷೆ

ಹುಬ್ಬಳ್ಳಿ: ಆಸ್ತಿ ಕಲಹದ ಹಿನ್ನೆಲೆಯಲ್ಲಿ 11 ವರ್ಷಗಳ ಹಿಂದೆ ಕುಂದಗೋಳ ತಾಲೂಕು ಬೆಟದೂರು ಗ್ರಾಮದ ಒಂದೇ ಕುಟುಂಬದ ಮೂವರನ್ನು ಗುಂಡಿಟ್ಟು ಹತ್ಯೆಗೈದಿದ್ದ ಸಿಆರ್ ಪಿಎಫ್ ಯೋಧ ಶಂಕ್ರಪ್ಪ ತಿಪ್ಪಣ್ಣ ಕೊರವರಗೆ 24 ವರ್ಷ ಜೀವಾವಧಿ ಶಿಕ್ಷೆ ಹಾಗೂ 2.20 ಲಕ್ಷ ರೂ. ದಂಡ ವಿಧಿಸಿ ಇಲ್ಲಿಯ 1ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಆದೇಶಿಸಿದೆ.
ಇದೇ ಗ್ರಾಮದ ಯಲ್ಲಪ್ಪ ಭಜಂತ್ರಿ(38), ಮಕ್ಕಳಾದ ಸೋಮಪ್ಪ ಭಜಂತ್ರಿ(11) ಹಾಗೂ ಐಶ್ವರ್ಯ ಭಜಂತ್ರಿ (9)ಯನ್ನು ಹತ್ಯೆ ಮಾಡಿದ್ದು, ಈ ಗುಂಡಿನದಾಳಿ ವೇಳೆ ಮದನಕುಮಾರ್ ಎಂಬವರು ಸಹ ಗಾಯಗೊಂಡಿದ್ದರು.
2010 ರಲ್ಲಿ ನಡೆದಿದ್ದ ಭೀಕರ ಹತ್ಯೆ ಘಟನೆ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು.
ಈ ಕುರಿತು ವಿಚಾರಣೆ ನಡೆಸಿದ 1ನೇ ಅಧಿಕ ಮತ್ತು ಜಿಲ್ಲಾ ಸತ್ತ ನ್ಯಾಯಾಲಯದ ನ್ಯಾಯಾಧೀಶ ದೇವೇಂದ್ರಪ್ಪ ಎನ್.ಬಿರಾದಾರ್ ಅವರು ಯೋಧನಿಗೆ 24 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಸೇರಿದಂತೆ ಜೀವಾವಧಿ ಶಿಕ್ಷೆ ಹಾಗೂ 2.20 ಲಕ್ಷ ರೂ. ದಂಡ ವಿಧಿಸಲು ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಗಿರಿಜಾ ಎಸ್. ತಮ್ಮಿನಾಳ ವಾದ ಮಂಡಿಸಿದ್ದರು.
ಸಿಆರ್‌ಪಿಎಫ್ ಯೋಧ ಶಂಕ್ರಪ್ಪ 2010 ರಲ್ಲಿ ಮದುವೆಯಾಗಿದ್ದರು. ನಾಲ್ಕೈದು ತಿಂಗಳಲ್ಲೇ ಗಂಡ – ಹೆಂಡತಿ ನಡುವೆ ಜಗಳವಾಗಿ, ಹೆಂಡತಿ ತವರು ಸೇರಿದ್ದಳು. ಇದಕ್ಕೆ ತನ್ನ ಸಂಬಂಧಿಕರಾದ ಯಲ್ಲಪ್ಪ ಭಜಂತ್ರಿ ಕುಟುಂಬದವರೇ ಕಾರಣ ಎಂದು ಶಂಕ್ರಪ್ಪ ತಿಳಿದುಕೊಂಡಿದ್ದ.ಅಲ್ಲದೆ, ಹುಬ್ಬಳ್ಳಿಯಲ್ಲಿರುವ ತಾಯಿಯ ಆಸ್ತಿಯೂ ತಮ್ಮ ಹೆಸರಿಗೆ ಬರುವಂತೆ ಮಾಡಲು ಸಂಬಂಧಿಗಳು ನೆರವಾಗಲಿಲ್ಲಎಂದು ಸಿಟ್ಟುಗೊಂಡಿದ್ದ. ಈ ದ್ವೇಷದಿಂದ ಯಲ್ಲಪ್ಪನ ಕುಟುಂಬವನ್ನು ಸರ್ವನಾಶ ಮಾಡಬೇಕೆಂದು ಹೊಂಚು ಹಾಕಿದ್ದ.
ಅಕ್ರಮವಾಗಿ ತಂದಿದ್ದ ಪಿಸ್ತೂಲ್ ಇಟ್ಟುಕೊಂಡು 20 ಆಗಸ್ಟ್ 2010 ರಂದು ಮಧ್ಯರಾತ್ರಿ ಯಲ್ಲಪ್ಪನ ಮನೆಗೆ ಶಂಕ್ರಪ್ಪ ತೆರಳಿದ್ದ. ಅವರ ಮನೆಯಲ್ಲಿಯೇ ಊಟ ಮಾಡಿ ನಂತರ ಏಕಾಏಕಿ ಪಿಸ್ತೂಲ್ ತೆಗೆದು ಯಲ್ಲಪ್ಪನಿಗೆ ಹಾರಿಸಿದ್ದ. ತಪ್ಪಿಸಿಕೊಳ್ಳಲು ಯತ್ನಿಸಿದ ಯಲ್ಲಪ್ಪನ ಪತ್ನಿ ಗೀತಾ ಹಾಗೂ ಮಕ್ಕ ಮೇಲೆಯೂ ಗುಂಡು ಹಾರಿಸಿದ್ದ. ಯಲ್ಲಪ್ಪನ ಮಕ್ಕಳಾದ ಸೋಮಪ್ಪ ಹಾಗೂ ಐಶ್ವರ್ಯ ಗುಂಡು ಹಾರಿಸಿ ಕೊಲೆ ಮಾಡಿದ್ದ. ಯಲ್ಲಪ್ಪನ ಪತ್ನಿ ಗೀತಾ ಗುಂಡೇಟಿನಿಂದ ಪಾರಾಗಿದ್ದಳು. ಘಟನೆಯಲ್ಲಿ ಮದನಕುಮಾರ ಎಂಬುವರು ಗಾಯಗೊಂಡಿದ್ದರು.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement