ರಣವ್ಯೂಹಗಳ ನಿಪುಣ ಜನರಲ್‌ ಬಿಪಿನ್‌ ರಾವತ್‌ ನಿಧನಕ್ಕೆ ಧಾರವಾಡ ಜೆಎಸ್ಎಸ್‌ನಿಂದ ಶ್ರದ್ಧಾಂಜಲಿ

ಧಾರವಾಡ: ಭಾರತದ ಸೇನಾ ಇತಿಹಾಸದಲ್ಲಿಯೇ ಕಂಡು ಕೇಳರಿಯದ ಘನಘೋರ ದುರಂತ ಬುಧವಾರ ಸಂಭವಿಸಿದೆ. ಹೆಲಿಕಾಪ್ಟರ್ ದುರಂತದಲ್ಲಿ ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್‌ ಅವರನ್ನು ದೇಶ ಕಳೆದುಕೊಂಡಿದೆ ಎಂದು ಧಾರವಾಡದ ಜೆ.ಎಸ್.ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಹೇಳಿದರು.
ಧಾರವಾಡದ ಜೆ.ಎಸ್.ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಶಿಕ್ಷಣ ವತಿಯಿಂದ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಉರಿ ಸೇನಾ ಶಿಬಿರದ ಮೇಲೆ ಭಯೋತ್ಪಾದಕ ದಾಳಿಯ ಪ್ರತೀಕವಾಗಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ನೇತೃತ್ವದಲ್ಲಿ ಪಾಕಿಸ್ತಾನದಲ್ಲಿ ನೆಲೆಸಿರುವ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಲು ಸರ್ಜಿಕಲ್ ಸ್ಟ್ರೈಕ್‌ ನಡೆಸಲಾಗಿತ್ತು. ರಾವತ್ ಅವರು ವೃತ್ತಿ ಜೀವನದ ಬಹುಪಾಲು ಚೀನಾ ಗಡಿ ಮತ್ತು ಈಶಾನ್ಯದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ಇವರ ವಿಶಿಷ್ಟ ಸೇವೆಗಾಗಿ ಬಿಪಿನ್ ರಾವತ್ ಅವರಿಗೆ ಇಂಡಿಯನ್ ಮಿಲಿಟರಿ ಅಕಾಡೆಮಿ (ಐಎಂಎ) ಯಲ್ಲಿ ಸ್ಟರ್ಡ್ ಆಫ್ ಆನರ್ ಪ್ರಶಸ್ತಿ ನೀಡಲಾಗಿದೆ ಇಂತಹ ಅನರ್ಘ್ಯ ರತ್ನವನ್ನು ನಾವು ಕಳೆದುಕೊಂಡಿದ್ದೇವೆ ಎಂದು ಅವರು ಹೇಳಿದರು.
ಜನರಲ್ ಬಿಪಿನ್ ರಾವತ್ ಹಲವು ಪ್ರಮುಖ ಸೂಚನಾ ಮತ್ತು ಸಿಬ್ಬಂದಿ ನೇಮಕಾತಿಗಳನ್ನು ನಡೆಸಿದ್ದಾರೆ. ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ (ಡೆಹ್ರಾಡೂನ್) ಮತ್ತು ಜೂನಿಯರ್ ಕಮಾಂಡ್ ವಿಂಗ್‌ನಲ್ಲಿ ಹಿರಿಯ ಬೋಧಕರಾಗಿದ್ದರು. ಮಿಲಿಟರಿ ಕಾರ್ಯಾಚರಣೆ ನಿರ್ದೇಶನಾಲಯದಲ್ಲಿ ಜನರಲ್ ಸ್ಟಾಫ್ ಆಫೀಸರ್ ಆಗಿದ್ದರು, ಕರ್ನಲ್ ಮತ್ತು ನಂತರ ಮಿಲಿಟರಿ ಕಾರ್ಯದರ್ಶಿಯ ಶಾಖೆಯಲ್ಲಿ ಉಪ ಮಿಲಿಟರಿ ಕಾರ್ಯದರ್ಶಿ, ಮೇಜರ್ ಜನರಲ್ ಜನರಲ್ ಸ್ಟಾಫ್ ಮತ್ತು ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರೂ ಆಗಿ ಸೇವೆ ಸಲ್ಲಿಸಿದ್ದರು. ಜನರಲ್ ಅವರು ೩೧ ಡಿಸೆಂಬರ್ ೨೦೧೬ ರಿಂದ ೩೧ ಡಿಸೆಂಬರ್ ೨೦೧೯ ರವರೆಗೆ ಸೇನೆ ಮುಖ್ಯಸ್ಥರಾಗಿದ್ದರು. ಶೈಕ್ಷಣಿಕ ವಲಯದಲ್ಲಿ ಹೆಚ್ಚು ಒಲವು ಹೊಂದಿರುವ ಬಿಪಿನ್ ರಾವತ್, ರಾಷ್ಟ್ರೀಯ ಭದ್ರತೆ ಮತ್ತು ಮಿಲಿಟರಿ ನಾಯಕತ್ವದ ಕುರಿತು ಹಲವಾರು ಲೇಖನಗಳನ್ನು ಬರೆದಿದ್ದಾರೆ. ಅವುಗಳು ವಿವಿಧ ಜರ್ನಲ್‌ಗಳಲ್ಲಿ ಪ್ರಕಟವಾಗಿವೆ ಎಂದರು.
ಅವರ ಸಂಪೂರ್ಣ ಸೇವಾ ವೃತ್ತಿಜೀವನದ ೪೨ ವರ್ಷಗಳ ಅವಧಿಯಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆ ಮತ್ತು ಶೌರ್ಯಕ್ಕಾಗಿ, ಜನರಲ್ ಬಿಪಿನ್ ರಾವತ್ ಅವರಿಗೆ PVSM, UYSM, AVSM, YSM, SM ªÀÄvÀÄÛ VSM ಸೇರಿದಂತೆ ಹಲವಾರು ರಾಷ್ಟ್ರಪತಿ ಪ್ರಶಸ್ತಿಗಳನ್ನು ನೀಡಲಾಗಿದೆ. ಇವುಗಳ ಜೊತೆಗೆ, ಅವರು ಎರಡು ಸಂದರ್ಭಗಳಲ್ಲಿ ಸೇನಾ ಮುಖ್ಯಸ್ಥರ ಶ್ಲಾಘನೆ ಮತ್ತು ಸೇನಾ ಕಮಾಂಡರ್ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಾಂಗೋದಲ್ಲಿ ವಿಶ್ವಸಂಸ್ಥೆ ಶಾಂತಿ ಪಾಲನಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ, ಅವರಿಗೆ ಎರಡು ಬಾರಿ ಫೋರ್ಸ್ ಕಮಾಂಡರ್‌ನ ಪ್ರಶಂಸೆ ನೀಡಲಾಗಿದೆ. ಇಂತಹ ಅಪ್ರತಿಮ ಯೋಧನನ್ನು ಕಳೆದುಕೊಂಡ ಜನತೆ ಅತೀವ ದುಃಖದಲ್ಲಿದ್ದಾರೆ. ಅವರ ಜೊತೆ ೧೨ ಜನರ ಮರಣ ಸಂಭವಿಸಿದೆ. ಅವರೆಲ್ಲರಿಗೂ ಆತ್ಮಕ್ಕೆ ಶಾಂತಿ ಕೋರೊಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಮಹಾವೀರ ಉಪಾದ್ಯೆ, ಡಾ. ಜಿ. ಕೃಷ್ಣ ಮೂರ್ತಿ, ಜಿನ್ನಪ್ಪ ಕುಂದಗೋಳ, ಭಾರತಿ ಶಾನಭಾಗ, ವಿವೇಕ ಲಕ್ಷ್ಮೇಶ್ವರ, ಎಮ್. ಎನ್ ರಾಶಿನ್‌ಕರ್ ಉಪಸ್ಥಿತರಿದ್ದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement