ವಾಂಖೆಡೆ ಕುಟುಂಬದ ವಿರುದ್ಧ ಹೇಳಿಕೆ: ಹೈಕೋರ್ಟ್‌ಗೆ ಬೇಷರತ್ ಕ್ಷಮೆಯಾಚಿಸಿದ ನವಾಬ್ ಮಲಿಕ್

ಮುಂಬೈ: ಎನ್‌ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ಅವರ ಕುಟುಂಬದವರ ಮೇಲಿನ ಟೀಕೆಗೆ ಸಂಬಂಧಿಸಿದಂತೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಮತ್ತು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಶುಕ್ರವಾರ ಬಾಂಬೆ ಹೈಕೋರ್ಟ್‌ಗೆ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಇನ್ನು ಮುಂದೆ ಅಂತಹ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಅವರು ಈ ಹಿಂದೆ ಬಾಂಬೆ ಹೈಕೋರ್ಟ್​ಗೆ ಭರವಸೆ ನೀಡಿದ್ದರು. ಆದರೆ, ಮತ್ತೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರಿಂದ ಹೈಕೋರ್ಟ್‌ ಗರಂ ಆದ ಹಿನ್ನೆಲೆಯಲ್ಲಿ ಅವರು ಕ್ಷಮೆ ಯಾಚಿಸಿದ್ದಾರೆ. ಸಮೀರ್ ವಾಂಖೆಡೆ ಅವರ ವಿರುದ್ಧ ಯಾವುದೇ ನೇರ ಅಥವಾ ಪರೋಕ್ಷ ಹೇಳಿಕೆ ನೀಡುವುದಿಲ್ಲ ಎಂದು ನವಾಬ್ ಮಲಿಕ್ ಮತ್ತು ಅವರ ಕುಟುಂಬ ಬಾಂಬೆ ಹೈಕೋರ್ಟ್‌ಗೆ ಭರವಸೆ ನೀಡಿತ್ತು.
ಮಲಿಕ್ ಪರ ಹಾಜರಾದ ಹಿರಿಯ ವಕೀಲ ಆಸ್ಪಿ ಚಿನೋಯ್ ಅವರು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಿಂದ ಅಫಿಡವಿಟ್ ಸಲ್ಲಿಸಿದರು, ಅಲ್ಲಿ ಅವರು ನವೆಂಬರ್ 29 ರ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಕ್ಷಮೆಯಾಚಿಸಿದರು.
ನವಾಬ್ ಮಲಿಕ್ ಅವರು ಉದ್ದೇಶಪೂರ್ವಕವಾಗಿ ತಮ್ಮ ಮಾತನ್ನು ಮೀರಿ, ಕೋರ್ಟ್​ಗೆ ನೀಡಿದ್ದ ಭರವಸೆಯನ್ನು ಉಲ್ಲಂಘಿಸಿದ್ದಾರೆ ಮತ್ತು ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ಅವರ ಕುಟುಂಬದ ವಿರುದ್ಧ ಮಾತನಾಡಿದ್ದಾರೆ ಎಂದು ಹೈಕೋರ್ಟ್‌ ಹೇಳಿದೆ. ತಮ್ಮ ಮಗನ ವಿರುದ್ಧ ಮತ್ತೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಸಮೀರ್ ವಾಂಖೆಡೆ ಅವರ ತಂದೆ ಜ್ಞಾನದೇವ್ ವಾಂಖೆಡೆ ನವಾಬ್ ಮಲಿಕ್ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು.
ನವಾಬ್ ಮಲಿಕ್ ಇಂದು, ಶುಕ್ರವಾರ ಕೋರ್ಟ್​ ಎದುರು ನೀಡಿರುವ ಹೇಳಿಕೆಯಲ್ಲಿ, ನವೆಂಬರ್ 25 ಮತ್ತು ನವೆಂಬರ್ 29ರ ಆದೇಶಗಳಲ್ಲಿ ದಾಖಲಾಗಿರುವಂತೆ ಈ ನ್ಯಾಯಾಲಯಕ್ಕೆ ನೀಡಲಾದ ನನ್ನ ಒಪ್ಪಂದದ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ನಾನು ಈ ಗೌರವಾನ್ವಿತ ನ್ಯಾಯಾಲಯಕ್ಕೆ ಬೇಷರತ್ ಕ್ಷಮೆ ಯಾಚಿಸುತ್ತೇನೆ. ಇದು ಉದ್ದೇಶಪೂರ್ವಕವಾಗಿ ಮಾಡಿದ ತಪ್ಪಲ್ಲ. ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಾಗ ಸಮೀರ್ ವಾಂಖೆಡೆ ವಿರುದ್ಧ ಮಾತನಾಡಿದ್ದೇನೆ ಎಂದು ಸಚಿವ ನವಾಬ್‌ ಮಲಿಕ್‌ ಹೇಳಿದ್ದಾರೆ.
ಮಾಧ್ಯಮಗಳಿಗೆ ನೀಡಿದ ಸಂದರ್ಶನದ ಸಂದರ್ಭದಲ್ಲಿ ನಾನು ನೀಡಿದ ಪ್ರತಿಕ್ರಿಯೆಗಳು ಈ ನ್ಯಾಯಾಲಯಕ್ಕೆ ನಾನು ನೀಡಿದ ಭರವಸೆಯ ವ್ಯಾಪ್ತಿಯಲ್ಲಿಲ್ಲ ಎಂಬ ನಂಬಿಕೆಯಿಂದ ನಾನು ಈ ಪ್ರತಿಕ್ರಿಯೆಗಳನ್ನು ನೀಡಿದ್ದೆ. ತಪ್ಪಾಗಿದ್ದರೆ ಬೇಷರತ್‌ ಕ್ಷಮೆಯಾಚಿಸುವೆ ಎಂದು ನವಾಬ್ ಮಲಿಕ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಎಎಪಿ ನಾಯಕಿ ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ವಿವಾದ ; ಮಲಿವಾಲ್‌ ಬೆಂಬಲಕ್ಕೆ ನಿಂತ ಪ್ರಿಯಾಂಕಾ ಗಾಂಧಿ, ಪ್ರಶ್ನೆಗೆ ಉತ್ತರಿಸದೆ ಮೈಕ್‌ ಮತ್ತೊಬ್ಬರಿಗೆ ಕೊಟ್ಟ ಕೇಜ್ರಿವಾಲ್

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement