ಹಾಸನ: ಕಾಯಿಲೆ ಗುಣಪಡಿಸುವುದಾಗಿ ಹೇಳಿ ಅನಾರೋಗ್ಯ ಪೀಡಿತ ಮಹಿಳೆಗೆ ಪೂಜೆ ವೇಳೆ ಪೂಜಾರಿ ಬೆತ್ತದ ಏಟು ನೀಡಿದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ಪಾರ್ವತಿ (37) ಎಂದು ಗುರುತಿಸಲಾಗಿದೆ. ಕಳೆದ ಕೆಲದಿನಗಳಿಂದ ತಲೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಬೇರೆಬೇರೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದರೂ ಗುಣಮುಖವಾಗಿರಲಿಲ್ಲ. ಹೀಗಾಗಿ ದೇವರ ಮೊರೆ ಹೋಗಿದ್ದರು. ನೀವು ಗುಣಮುಖರಾಗಲು ಪೂಜೆ ಮಾಡಿಸಬೇಕು ಎಂದು ಮಹಿಳೆಗೆ ಪೂಜಾರಿ ತಿಳಿಸಿದ್ದಾರೆ. ಪೂಜೆ ಮಾಡಿ ತಲೆನೋವು ಗುಣಪಡಿಸುವುದಾಗಿ ಹೇಳಿ ಮಹಿಳೆ ತಲೆಗೆ ಪೂಜಾರಿ ಬೆತ್ತದಿಂದ ಹೊಡೆದಿದ್ದಾರೆ.
ಬೆತ್ತದಿಂದ ತಲೆಗೆ ಹೊಡೆದ ಪರಿಣಾಮ ಮಹಿಳೆ ಅಸ್ವಸ್ಥಗೊಂಡಿದ್ದಾರೆ. ತೀವ್ರ ಅಸ್ವಸ್ಥಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಹಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಘಟನೆ ನಂತರ ಪೂಜಾರಿ ನಾಪತ್ತೆಯಾಗಿದ್ದು, ಈ ಸಂಬಂಧ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ