ಕೆಪಿಎಸ್‍ಸಿ ಪರೀಕ್ಷೆ : ರೈಲು ವಿಳಂಬದಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದವರಿಗೆ ಡಿ.29ಕ್ಕೆ ಮರು ಪರೀಕ್ಷೆ

ಬೆಂಗಳೂರು: ಡಿ.14 ರಂದು ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಅಭಿಯಂತಕರು -1 ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕಲಬುರಗಿ ಪರೀಕ್ಷಾ ಕೇಂದ್ರಗಳಲ್ಲಿ ಬೆಳಗಿನ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೇ ಮಧ್ಯಾಹ್ನದ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರಿಂಗ್ ಹುದ್ದೆಯ ಸಾಮಾನ್ಯ ಪತ್ರಿಕೆಯ ಮರು ಪರೀಕ್ಷೆ ಡಿಸೆಂಬರ್‌ 29ರಂದು ನಡೆಯಲಿದ್ದು, ಬೆಂಗಳೂರಿನಲ್ಲಿ ನಡೆಸಲಾಗುತ್ತದೆ ಎಂದು ಕೆಪಿಎಸ್‍ಸಿ ತಿಳಿಸಿದೆ.
ಹಾಸನ-ಸೋಲಾಪುರ ಎಕ್ಸ್ ಪ್ರೆಸ್ ಮತ್ತು ಉದ್ಯಾನ್ ಎಕ್ಸ್ ಪ್ರೆಸ್ ರೈಲು ತಡವಾಗಿದ್ದರಿಂದ ಕಲಬುರಗಿ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕಾಗಿದ್ದ ಅಭ್ಯರ್ಥಿಗಳು ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ ಈ ನಿರ್ಧಾರ ಕೈಗೊಂಡಿದೆ.
ಕಲಬುರಗಿ ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗಿನ ಅಧಿವೇಶನದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೇ ಮಧ್ಯಾಹ್ನದ ಅಧಿವೇಶನದ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಮಾತ್ರ ಸಾಮಾನ್ಯ ಪತ್ರಿಕೆ-1 ರ ಮರು ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ತಿಳಿಸಿದೆ.
ಈ ಪರೀಕ್ಷೆ ಬರೆಯಬೇಕಾದರೆ ಅಭ್ಯರ್ಥಿಗಳು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕು. ಮನವಿ ಪತ್ರ, ಹಾಸನ-ಸೋಲಾಪುರ ಎಕ್ಸ್ ಪ್ರೆಸ್ ಮತ್ತು ಉದ್ಯಾನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ ಸಂಬಂಧ ಟಿಕೆಟ್ ಪ್ರತಿ ಮತ್ತು ಆಯೋಗ ನೀಡಿರುವ ಪ್ರವೇಶ ಪತ್ರದ ಪ್ರತಿಯನ್ನು ಮಧ್ಯಾಹ್ನದ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಡಿಸೆಂಬರ್‌ 22ರ ಒಳಗಡೆ ಕರ್ನಾಟಕ ಲೋಕಸೇವಾ ಆಯೋಗ ಬೆಂಗಳೂರಿಗೆ ಸಲ್ಲಿಸಬೇಕು ಎಂದು ಸೂಚಿಸಿದೆ.
ಒಂದು ವೇಳೆ ಈ ದಾಖಲೆಗಳನ್ನು ಸಲ್ಲಿಸಲು ಅಭ್ಯರ್ಥಿಗಳು ವಿಫಲವಾದರೆ ಮರು ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಈ ದಾಖಲೆಗಳನ್ನು ಸ್ಪೀಡ್ ಪೋಸ್ಟ್ ಮುಖಾಂತರ ಅಥವಾ ಖುದ್ದಾಗಿ ಕೇಂದ್ರ ಕಚೇರಿಗೆ ಬಂದು ಅಥವಾ ಇಮೇಲ್ ಮುಖಾಂತರ ಸಲ್ಲಿಸಬಹುದು ಎಂದು ತಿಳಿಸಿದೆ.
ಹಾಸನ-ಸೋಲಾಪುರ ಸೂಪರ್ ಫಾಸ್ಟ್, ಉದ್ಯಾನ್ ರೈಲು ಬೆಳಗ್ಗೆ 6 ಗಂಟೆಗೆ ಕಲಬುರಗಿ ನಗರಕ್ಕೆ ಬರಬೇಕಿತ್ತು. ಆದರೆ ತಾಂತ್ರಿಕ ತೊಂದರೆಯಿಂದ ರೈಲುಗಳು ಬೆಳಗ್ಗೆ 6 ಗಂಟೆ ಬದಲಾಗಿ ಮಧ್ಯಾಹ್ನ 1:30ಕ್ಕೆ ಕಲಬುರಗಿ ತಲುಪಿತ್ತು. ಹೀಗಾಗಿ ಲಿಖಿತ ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಗಳಿಗೆ ಬೆಳಗಿನ ಪರೀಕ್ಷೆ ಬರೆಲು ಸಾಧ್ಯವಾಗಿರಲಿಲ್ಲ. ಇದರಿಂದ ಎಚ್ಚೆತ್ತ ಪರೀಕ್ಷಾ ಕೇಂದ್ರ ಕೆಪಿಎಸ್‍ಸಿ ರೈಲು ವಿಳಂಬವಾದ ಅಭ್ಯರ್ಥಿಗಳಿಗೆ ಪರೀಕ್ಷೆ ಸಮಯ ಬದಲಾವಣೆ ಮಾಡಿತ್ತು. ಬೆಳಗ್ಗೆ 11 ಗಂಟೆಯ ಪತ್ರಿಕೆ ಹಾಜರಾಗಲು ಅಭ್ಯರ್ಥಿಗಳಿಗೆ ಸಾಧ್ಯವಾಗಿಲ್ಲದ ಕಾರಣ ಮಧ್ಯಾಹ್ನ 2 ಗಂಟೆಗೆ ಎರಡನೇ ಪರೀಕ್ಷೆ ಹಾಜರಾಗಲು ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿತ್ತು.

ಪ್ರಮುಖ ಸುದ್ದಿ :-   ಬೆಂಗಳೂರು: ಕುದುರೆಯೊಂದರಲ್ಲಿ ಗ್ಲಾಂಡರ್ಸ್ ರೋಗ ಪತ್ತೆ ; ಡಿಜಿ ಹಳ್ಳಿ ನಿಷೇಧಿತ ವಲಯವೆಂದು ಘೋಷಣೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement