‌ ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣ: ಆರ್ಯನ್​ ಖಾನ್​ಗೆ ರಿಲೀಫ್, ಜಾಮೀನಿನ ಷರತ್ತು ಸಡಿಲಗೊಳಿಸಿ ಬಾಂಬೆ ಹೈಕೋರ್ಟ್ ಆದೇಶ

ಮುಂಬೈ : ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದ ಆರೋಪಿ ಆರ್ಯನ್ ಖಾನ್‌ಗೆ ಬಾಂಬೆ ಹೈಕೋರ್ಟ್ ರಿಲೀಫ್ ನೀಡಿದೆ.
ಜಾಮೀನು ಷರತ್ತನ್ನು ಮಾರ್ಪಡಿಸಲು ಕೋರಿ ಆರ್ಯನ್‌ ಖಾನ್‌ ಮಾಡಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ಪುರಸ್ಕರಿಸಿದ್ದು, ಪ್ರತಿ ಶುಕ್ರವಾರ ಎನ್‌ಸಿಬಿ ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಿ ಆದೇಶ ಮಾಡಿದೆ.
ಬಾಂಬೆ ಹೈಕೋರ್ಟ್, ಆರ್ಯನ್ ಖಾನ್‌ಗೆ ಜಾಮೀನು ನೀಡುವ ಸಂದರ್ಭದಲ್ಲಿ, ಪ್ರತಿ ಶುಕ್ರವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯ ನಡುವೆ ಎನ್​ಸಿಬಿಗೆ ಹಾಜರಾಗಬೇಕು ಎಂದು ಹೇಳಿತ್ತು. ಅದರಂತೆ ಆರ್ಯನ್ ಖಾನ್ ಅವರು ನವೆಂಬರ್ 5, 12, 19, 26 ಮತ್ತು ಡಿಸೆಂಬರ್ 3 ಮತ್ತು 10 ರಂದು ಎನ್​ಸಿಬಿ ಮುಂದೆ ಹಾಜರಾಗಿದ್ದರು.
ಎನ್‌ಸಿಬಿಯ ಮೂರು ಪುಟಗಳ ಪ್ರತಿಕ್ರಿಯೆ ಮತ್ತು ಆರ್ಯನ್ ಖಾನ್ ಅವರ ಮನವಿಯನ್ನು ಪರಿಶೀಲಿಸಿದ ನಂತರ, ನ್ಯಾಯಮೂರ್ತಿ ಎನ್‌ಡಬ್ಲ್ಯೂ ಸಾಂಬ್ರೆ ಅವರು ಆರ್ಯನ್ ಖಾನ್ ಅವರನ್ನು ಎನ್‌ಸಿಬಿಯಿಂದ ಯಾವಾಗ ಮತ್ತು ಎಲ್ಲಿಗೆ ಕರೆದರೂ ಸಾಕಷ್ಟು ಸಮಯ ನೀಡಿದರೆ ಪ್ರಯಾಣಿಸಲು ತೊಂದರೆಯಿಲ್ಲ ಎಂದು ತಿಳಿಸಿದ್ದನ್ನು ಗಮನಿಸಿದರು. ಮತ್ತು ಈ ಕುರಿತು ಕೋರ್ಟ್, ಎನ್​ಸಿಬಿ ಕಚೇರಿ ಹೊರತಾದ ಯಾವುದೇ ಸ್ಥಳಗಳಿಗೆ ಆರ್ಯನ್ ತೆರಳುವ ಮುನ್ನ ಡ್ರಗ್ ಕ್ರೂಸ್ ಪ್ರಕರಣದ ತನಿಖಾಧಿಕಾರಿಗೆ ತಿಳಿಸಬೇಕು ಎಂದು ಆದೇಶಿಸಿದೆ.
ಆರ್ಯನ್ ಖಾನ್ ಬಾಂಬೆ ಹೈಕೋರ್ಟ್‌ಗೆ ಮೊರೆ ಹೋಗಿ ಜಾಮೀನು ಷರತ್ತುಗಳನ್ನು ಮಾರ್ಪಾಡು ಮಾಡುವಂತೆ ಮನವಿ ಮಾಡಿದ್ದರು.
ಬುಧವಾರ ಆರ್ಯನ್ ಖಾನ್ ಪರ ವಕೀಲ ಅಮಿತ್ ದೇಸಾಯಿ ವಾದ ಮಂಡಿಸಿ, ‘‘ಅವರು (ಖಾನ್) ಸಹಕರಿಸುತ್ತಾರೆ ಮತ್ತು ಎನ್​ಸಿಬಿ ಬಯಸಿದಾಗ ಬಂದು ಹೋಗುತ್ತಾರೆ. ಈಗ ದೆಹಲಿಯಿಂದ ತನಿಖೆ ನಡೆಯುತ್ತಿದೆ, ಒಂದು ವೇಳೆ ಅವರು ದೆಹಲಿಗೆ ಬರಬೇಕೆಂದು ಬಯಸಿದರೆ ಆರ್ಯನ್ ಅಲ್ಲಿಗೂ ತೆರಳುತ್ತಾರೆ. ಎಂದು ಕೋರ್ಟಿಗೆ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದರು.
ಎನ್‌ಸಿಬಿ ಪರ ವಾದ ಮಂಡಿಸಿದ ವಕೀಲ ಶ್ರೀರಾಮ್ ಶಿರ್ಸತ್, ಜಾಮೀನು ಷರತ್ತನ್ನು ಮಾರ್ಪಾಡು ಮಾಡುವಲ್ಲಿ ಎನ್​ಸಿಬಿಗೆ ಯಾವುದೇ ತೊಂದರೆ ಇಲ್ಲ. ಆದರೆ ಆರ್ಯನ್ ಅವರು ದೆಹಲಿ ಅಥವಾ ಮುಂಬೈಗೆ ಕರೆದಾಗ ಹಾಜರಾಗಬೇಕು ಎಂದು ತಿಳಿಸಿದರು. ನಂತರ ಕೋರ್ಟ್ ಜಾಮೀನು ಷರತ್ತನ್ನು ಸಡಿಲಿಸಿ ಆದೇಶ ನೀಡಿದೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement