ಪಣಜಿ: ಲೈಂಗಿಕ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದ ಕೆಲವೇ ಗಂಟೆಗಳ ನಂತರ ಗೋವಾ ನಗರಾಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಸಚಿವ ಮಿಲಿಂದ್ ನಾಯಕ್ ಬುಧವಾರ ಸಂಜೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
“ಅವರು (ನಾಯಕ್) ಮುಕ್ತ ಮತ್ತು ನ್ಯಾಯಸಮ್ಮತ ತನಿಖೆಗಾಗಿ ತಮ್ಮ ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ನಾನು ಅದನ್ನು ಅಂಗೀಕರಿಸಿದ್ದೇನೆ. ಕಾಂಗ್ರೆಸ್ ಯಾವುದೇ ಪುರಾವೆ ನೀಡಿದರೂ ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ನಾಯಕ್ ಅವರು ತಮ್ಮ ಪರವಾಗಿ ನಿಲ್ಲುತ್ತಾರೆ ಮತ್ತು ವೈಯಕ್ತಿಕ ಮಟ್ಟದಲ್ಲಿ ಹೋರಾಟ ಮಾಡುತ್ತಾರೆ ಎಂದು ಅವರು ಹೇಳಿದರು. ಅವರ ವಿರುದ್ಧ ಮಾಡಿರುವ ಆರೋಪಗಳು ವೈಯಕ್ತಿಕವಾಗಿದ್ದು, ಅದರ ಬಗ್ಗೆ ಅವರು ಏನು ಮಾಡುತ್ತಾರೆ ಎಂಬುದು ಅವರ ವೈಯಕ್ತಿಕ ವಿಷಯವಾಗಿದೆ. ಸರ್ಕಾರದ ಮಟ್ಟದಲ್ಲಿ ಏನು ತನಿಖೆಯಾಗಬೇಕೋ ಅದನ್ನು 100 ಪ್ರತಿಶತ ಮಾಡಲಾಗುವುದು ಎಂದು ಸಾವಂತ್ ಹೇಳಿದರು.
ನಾಯಕ್ ಅವರು ಈ ಹಿಂದೆ ಹೊಂದಿದ್ದ ಸಚಿವ ಸ್ಥಾನ ಖಾಲಿ ಉಳಿಯಲಿದೆ ಎಂದು ತಿಳಿಸಿದರು.
ಗೋವಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಚೋಡಂಕರ್ ಅವರು ಬುಧವಾರ ನಾಯಕ್ ಅವರನ್ನು “ಲೈಂಗಿಕ ಹಗರಣ” ದಲ್ಲಿ ಭಾಗಿಯಾಗಿರುವ ಸಚಿವ ಎಂದು ಆರೋಪಿಸಿದ್ದಾರೆ. ಅವರು ತಮ್ಮ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿದ್ದು, ಬಿಹಾರದ ಮಹಿಳೆಯನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ