ಕೇರಳ: ಸಕ್ರಿಯ ರಾಜಕಾರಣಕ್ಕೆ ಮೆಟ್ರೊಮ್ಯಾನ್ ಶ್ರೀಧರನ್ ಗುಡ್ ಬೈ

ಕೊಚ್ಚಿ: ‘ಮೆಟ್ರೊ ಮ್ಯಾನ್’ ಎಂದೇ ಖ್ಯಾತರಾದ ಇ ಶ್ರೀಧರನ್ ಸಕ್ರಿಯ ರಾಜಕಾರಣದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಧರನ್, ಇನ್ನು ಮುಂದೆ ಸಕ್ರಿಯ ರಾಜಕಾರಣದಲ್ಲಿ ತೊಡಗುವುದಿಲ್ಲ. ರಾಜಕೀಯದಿಂದ ದೂರ ಉಳಿದು ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. 90 ವರ್ಷ ವಯಸ್ಸಿನ ನಾನು ಇನ್ನು ಮುಂದೆ ಸಕ್ರಿಯ ರಾಜಕಾರಣದಲ್ಲಿರುವುದು ಸೂಕ್ತವಲ್ಲ ಭಾವಿಸಿದ್ದೇನೆ ಎಂದು ಶ್ರೀಧರನ್ ಹೇಳಿದ್ದಾರೆ.

90 ವರ್ಷ ವಯಸ್ಸಾಯಿತು. ಈ ವಯಸ್ಸಿನಲ್ಲಿ ರಾಜಕೀಯಕ್ಕೆ ಹೋಗುವುದುಸರಿಯಲ್ಲ. ರಾಜಕೀಯಕ್ಕೆ ಬಂದಾಗ ಒಳ್ಳೆಯ ಭರವಸೆ ಇತ್ತು. ಇನ್ನು ಮುಂದೆ ರಾಜಕೀಯದಲ್ಲಿ ಉತ್ಸಾಹ ಇರುವುದಿಲ್ಲ ಮತ್ತು ಸಕ್ರಿಯ ರಾಜಕಾರಣದಲ್ಲಿ ಇರುವುದಿಲ್ಲ. ದೇಶ ಸೇವೆ ಮಾಡಲು ರಾಜಕೀಯ ಬೇಕಿಲ್ಲ. ಇಲ್ಲದೆಯೂ ಸಾಧ್ಯವಿದೆ. ಪ್ರಸ್ತುತ ಜನರ ಸೇವೆಗಾಗಿ ಮೂರು ಟ್ರಸ್ಟ್‌ಗಳು ತಮ್ಮ ಕೈಕೆಳಗೆ ಕಾರ್ಯನಿರ್ವಹಿಸುತ್ತಿದೆ ಎಂದು ಶ್ರೀಧರನ್ ಹೇಳಿದ್ದಾರೆ.
ನಾನು ರಾಜಕಾರಣಿಯಲ್ಲ, ರಾಷ್ಟ್ರ ಸೇವಕ. ನಾನು ಸ್ಪರ್ಧೆಯಿಂದ ನಿರಾಶೆಗೊಂಡಿಲ್ಲ ಬಹಳಷ್ಟು ಕಲಿಯಲು ಸಿಕ್ಕಿತು ಎಂದು ಹೇಳಿದರು. ಚುನಾವಣೆಯಲ್ಲಿ ಸೋತಾಗ ನಿರಾಸೆ ಇತ್ತು. ಆದರೆ ಈಗ ಅಲ್ಲ. ಅಧಿಕಾರ ಸಿಗದೇ ಕೇವಲ ಶಾಸಕರಿಂದ ಏನೂ ಮಾಡಲು ಸಾಧ್ಯವಿಲ್ಲ. ಕೇರಳದ ಬಿಜೆಪಿಗೆ ಹಲವು ವಿಷಯಗಳಲ್ಲಿ ತಿದ್ದುಪಡಿಗಳ ಅಗತ್ಯವಿದೆ. ತಿದ್ದುಪಡಿಯು ವ್ಯತ್ಯಾಸವನ್ನುಂಟು ಮಾಡುತ್ತದೆ. ನೀತಿಗಳನ್ನು ಬದಲಾಯಿಸಿದರೆ ಕೇರಳದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯ ಎಂದರು.
ಈ ವರ್ಷ ಏಪ್ರಿಲ್‌ನಲ್ಲಿ ನಡೆದ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಶ್ರೀಧರನ್ ಅವರು ಕೇರಳದ ಪಾಲಕ್ಕಾಡ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರನ್ನು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದೂ ಬಿಂಬಿಸಲಾಗಿತ್ತು. ಶ್ರೀಧರನ್ ಪಾಲಕ್ಕಾಡ್‌ನಲ್ಲಿ ಉತ್ತಮ ಪೈಪೋಟಿ ನೀಡಿದ್ದರು. ಕಾಂಗ್ರೆಸ್‌ನ ಹಾಲಿ ಶಾಸಕ ಶಾಫಿ ಪರಂಬಿಲ್ ಅವರ ಮುನ್ನಡೆ 2016 ರಲ್ಲಿ 17,400 ಇತ್ತು.ಅದು 2021 ರಲ್ಲಿ ಸುಮಾರು 3,850 ಕ್ಕೆ ಇಳಿದಿದೆ. ಶ್ರೀಧರನ್ ಎಣಿಕೆಯ ಅಂತಿಮ ಗಂಟೆಗಳವರೆಗೆ ಮುನ್ನಡೆ ಕಾಯ್ದುಕೊಂಡಿದ್ದರು. ಇತ್ತೀಚೆಗೆ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಗೂ ಅವರು ವಿಶೇಷ ಆಹ್ವಾನಿತರಾಗಿದ್ದರು.

ಪ್ರಮುಖ ಸುದ್ದಿ :-   ಜೆಡಿಯು ಯುವ ಮುಖಂಡನ ಗುಂಡಿಕ್ಕಿ ಹತ್ಯೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement