ಬೆಳಗಾವಿ: ಅತ್ಯಾಚಾರ ಆಗುವಾಗ ತಡೆಯಲು ಸಾಧ್ಯವಾಗದಿದ್ದರೆ ಮಲಗಿ ಎಂಜಾಯ್ ಮಾಡಿಬಿಡಬೇಕು ಎಂದು ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಸದನದಲ್ಲಿದ್ದ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಈ ಹೇಳಿಕೆ ಸಹಜ ವಿದ್ಯಮಾನ ಎನ್ನುವಂತೆ ವರ್ತಿಸಿದರು. ಸದನದಲ್ಲಿ ಅತಿವೃಷ್ಟಿ ಕುರಿತು ನಿಯಮ 69ರ ಅಡಿಯಲ್ಲಿ ಚರ್ಚೆ ನಡೆಯುತ್ತಿದ್ದಾಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಜೆ 5ರ ವೇಳೆ ಚರ್ಚೆಗೆ ಹೆಚ್ಚಿನ ಸಮಯಬೇಕು ಎಂದು ಸದಸ್ಯರು ವಿನಂತಿಸಿದ್ದರು. ಆಗ ಸಂಜೆ 6 ಗಂಟೆ ವರೆಗೆ ಸಮಯ ಕೊಡುತ್ತೇನೆ ಎಂದು ಸ್ಪೀಕರ್ ಹೇಳಿದರು.
ಎಲ್ಲರೂ ಮಾತನಾಡಬೇಕು ಎನ್ನುತ್ತಾರೆ. ನನಗೆ ಸದನದ ಕಲಾಪ ನಡೆಯುವುದು ಮುಖ್ಯ. ಇದು ನಿಮ್ಮದೇ ಸದನ, ಈಗ ನನ್ನ ಪರಿಸ್ಥಿತಿ ಹೇಗಾಗಿದೆ ಅಂದರೆ ಲೆಟ್ಸ್ ಎಂಜಾಯ್ದ ಸಿಚುಯೇಷನ್ ಎನ್ನುವ ರೀತಿ ಆಗಿದೆ ರಮೇಶ್ ಕುಮಾರ್ ಅವರೇ’ ಎಂದು ಹೇಳಿದರು. ತಮ್ಮ ಹೆಸರು ಪ್ರಸ್ತಾಪವಾಗಿದ್ದಕ್ಕೆ ಎದ್ದುನಿಂತು ಪ್ರತಿಕ್ರಿಯಿಸಿದ ರಮೇಶ್ಕುಮಾರ್, ಎ ಸೇಯಿಂಗ್ ಇನ್ ಇಂಗ್ಲಿಷ್…ವೆನ್ ರೇಪ್ ಇಸ್ ಇನ್ನೆವಿಟೆಬಲ್ ಲೇ ಡೌನ್ ಅಂಡ್ ಎಂಜಾಯ್ ಇಟ್ , ದತ್ ಇಸ್ ದ ಪೊಸಿಶನ್ ನೌ (ಹೀಗೊಂದು ಮಾತಿದೆ…ರೇಪ್ ಆದಾಗ ತಡೆಯಲು ಸಾಧ್ಯವಾಗದಿದ್ರೆ ಮಲಗಿ ಎಂಜಾಯ್ ಮಾಡಬೇಕು, ಅಂಥ ಸ್ಥಿತಿ ಈಗ ಇಲ್ಲೂ ಇದೆ) ಎಂದರು. ಇದಕ್ಕೆ ಸ್ಪೀಕರ್ ಕಾಗೇರಿ ನಕ್ಕು ಸುಮ್ಮನಾದರು.
ಈ ಹಿಂದಿನ ಮೈತ್ರಿ ಸರ್ಕಾರದಲ್ಲಿ ಸ್ಪೀಕರ್ ಸ್ಥಾನದಲ್ಲಿದ್ದಾಗಲೂ ರಮೇಶ್ ಕುಮಾರ್ ಅವರು ಇಂಥದ್ದೇ ಹೇಳಿಕೆ ನೀಡಿದ್ದರು. ಬಿಜೆಪಿ ಅವರ ಹೇಳಿಕೆಯನ್ನು ಖಂಡಿಸಿ ರಾಜೀನಾಮೆಗೆ ಒತ್ತಾಯಿಸಿತ್ತು. ತಮ್ಮ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾದ ನಂತರ ಕ್ಷಮೆಯಾಚಿಸಿದ್ದರು. ಆದರೆ ಗುರುವಾರ ಸದನದಲ್ಲಿ ರಮೇಶ್ ಕುಮಾರ್ ಮತ್ತೊಮ್ಮೆ ಅಂಥದ್ದೇ ಹೇಳಿಕೆ ನೀಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ