ಮೈಸೂರು: ನಂದಿನಿ ತುಪ್ಪದ ಬ್ರ್ಯಾಂಡ್ ನಲ್ಲಿ ನಕಲಿ ಡಾಲ್ಡಾ, ಪಾಮೊಲಿನ್ ತುಂಬುತ್ತಿದ್ದ ಅಕ್ರಮ ಘಟಕದ ಮೇಲೆ ಮೈಮುಲ್ ಅಧಿಕಾರಿಗಳು ದಾಳಿ ಮಾಡಿ ಅಪಾರ ಪ್ರಮಾಣದ ನಕಲಿ ನಂದಿನಿ ತುಪ್ಪದ ಟಿನ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರಿನ ಹೊರವಲಯದ ಹೊಸಹುಂಡಿ ಗ್ರಾಮದ ಹೊರವಲಯದಲ್ಲಿ ನಕಲಿ ನಂದಿನಿ ತುಪ್ಪ ತಯಾರಿಕಾ ಘಟಕದ ಮೇಲೆ ಸ್ಥಳೀಯರ ನೆರವಿನಿಂದ ಮೈಸೂರು ಜಿಲ್ಲಾ ಹಾಲು ಒಕ್ಕೂಟ (ಮೈಮುಲ್) ಹಾಗೂ ಆಹಾರ ಸುರಕ್ಷತೆ, ಗುಣಮಟ್ಟ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಂದಿನಿ ಬ್ರಾಂಡ್ ಲೇಬಲ್ ಗಳನ್ನು ಟಿನ್ ಗಳಿಗೆ ಅಳವಡಿಸಿ ಅದಕ್ಕೆ ಡಾಲ್ಡಾ ಮತ್ತು ಪಾಮೊಲಿನ್ ಅನ್ನು ತುಂಬಿ ಮಾರಾಟ ಮಾಡುತ್ತಿದ್ದ ಆಘಾತಕಾರಿ ವಿಚಾರ ಈ ವೇಳೆ ಬೆಳಕಿಗೆ ಬಂದಿದೆ. ದಾಳಿ ವೇಳೆ ಸುಮಾರು ಒಂದೂವರೆ ಟನ್‌ನಷ್ಟು ಕಲಬೆರಕೆ ತುಪ್ಪ, 500 ಕೆ.ಜಿ ವನಸ್ಪತಿ, 500 ಲೀಟರ್ ಪಾಮೊಲಿನ್ ವಶಪಡಿಸಿಕೊಳ್ಳಲಾಗಿದೆ.
ಮೂಲಗಳ ಪ್ರಕಾರ ‘ಹ್ಯೂಮನ್ ರೈಟ್ಸ್’ ಸಂಘಟನೆಯ ಸದಸ್ಯರು ಹಾಗೂ ಸ್ಥಳೀಯರು ಘಟಕದ ಮೇಲೆ ಮೊದಲಿಗೆ ದಾಳಿ ನಡೆಸಿದ್ದರು. ನಂತರ, ‘ಮೈಮುಲ್’ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಕೂಡಲೇ ಎಚ್ಚೆತ್ತ ಮೈಮುಲ್ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ನಕಲಿ ನಂದಿನಿ ತುಪ್ಪ ತಯಾರಿಸುತ್ತಿದ್ದುದು ಖಚಿತಗೊಂಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ