ಕನ್ನಡಿಗರ ರಕ್ಷಣೆ ನಮ್ಮ ಸರ್ಕಾರದ ಹೊಣೆ: ಸಿಎಂ ಬೊಮ್ಮಾಯಿ

ಬೆಳಗಾವಿ: ಮಹಾರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ರಕ್ಷಣೆ ನಮ್ಮ ಸರ್ಕಾರದ ಹೊಣೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು, ಶನಿವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಬೆಳಗಾವಿಯಲ್ಲಿ ಶುಕ್ರವಾರ ರಾತ್ರಿ ನಡೆದ ಪ್ರಕರಣದ ಬಗ್ಗೆ ಮಾತನಾಡಿದರು.
ಕೆಲವರು ಕಾನೂನು ಬಾಹಿರವಾಗಿ ಪುಂಡಾಟಿಕೆ ಮಾಡಿದ್ದಾರೆ. ಕರ್ನಾಟಕದ ಕಾನೂನು ಸುವ್ಯವಸ್ಥೆ ನಮ್ಮ ಜವಾಬ್ದಾರಿ. ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ತೆ ಕಾಪಾಡಿಕೊಳ್ಳುವುದು ಅಲ್ಲಿನ ಸರ್ಕಾರದ ಜವಾಬ್ದಾರಿ. ಅಲ್ಲಿನ ಕನ್ನಡಿಗರ ರಕ್ಷಣೆ ಹಾಗೂ ಬಸ್ಸು ಇತ್ಯಾದಿ ವಾಹನಗಳ ರಕ್ಷಣೆ ಮಾಡಲು ನಮ್ಮ ಪೋಲಿಸ್ ಮಹಾ ನಿರ್ದೇಶಕರು ಅಲ್ಲಿನ ಪೊಲೀಸ್ ಮಹಾನಿರ್ದೇಶಕರೊಂದಿಗೆ ಹಾಗೂ ನಮ್ಮ ಗೃಹ ಸಚಿವರು ಮಹಾರಾಷ್ಟ್ರದ ಗೃಹ ಸಚಿವರೊಂದಿಗೆ ಮಾತನಾಡಲಿದ್ದಾರೆ. ಮೊದಲು ಅಧಿಕಾರಿಗಳು ಮಾತನಾಡುತ್ತಾರೆ. ನಂತರ ಅಗತ್ಯ ಬಿದ್ದರೆ ಅಲ್ಲಿನ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದರು.
ಶಿವಸೇನೆಯ ಸಂಜಯ್ ರಾವತ್ ಅವರು ಮರಾಠಿಗಳು ಒಂದಾಗುವಂತೆ ಕರೆ ನೀಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ, ಜವಾಬ್ದಾರಿ ಇರುವ ಜನರು ಯಾರನ್ನೂ ಯಾವ ಸಮಯದಲ್ಲಿಯೂ ಪ್ರಚೋದನೆ ಮಾಡಬಾರದು. ಛತ್ರಪತಿ ಶಿವಾಜಿ, ಸಂಗೊಳ್ಳಿ ರಾಯಣ್ಣ, ಕಿತ್ತೂರು ಚನ್ನಮ್ಮ ಇವರೆಲ್ಲ ಮಹಾನ್‌ ವ್ಯಕ್ತಿಗಳು, ದೇಶವನ್ನು ಒಗ್ಗೂಡಿಸಿದವರು. ಅವರ ಹೆಸರಿನಲ್ಲಿ ನಾವು ಜಗಳವಾಡಿಕೊಂಡು ಒಡಕು ಮೂಡಿಸಿದರೆ ಅದು ಅವರ ಹೋರಾಟಕ್ಕೆ ಅನ್ಯಾಯವೆಸಗಿದಂತಾಗುತ್ತದೆ. ಕಾನೂನನ್ನ ಕೈಗೆ ತೆಗೆದುಕೊಂಡು ಇಂತಹ ಕೆಲಸಗಳನ್ನು ಮಾಡಲು ಯಾರಿಗೂ ಕುಮ್ಮಕ್ಕು ನೀಡಬಾರದು ಎಂದರು.

ಪ್ರಮುಖ ಸುದ್ದಿ :-   ಪೆನ್‌ಡ್ರೈವ್ ಕೇಸ್‌ನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಹೇಳಲು ನನಗೆ 100 ಕೋಟಿ ರೂ. ಆಫರ್ ನೀಡಿದ್ದ ಡಿ.ಕೆ.ಶಿವಕುಮಾರ : ದೇವರಾಜೇ ಗೌಡ ಸ್ಫೋಟಕ ಹೇಳಿಕೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement