ಕೊಪ್ಪಳ: ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ಕೊಡುವ ಯೋಜನೆ ಆರಂಭಿಸಿದ ಸರ್ಕಾರದ ನಡೆ ವಿರೋಧಿಸಿ ಪಾಲಕರೊಬ್ಬರು ತನ್ನ ಪುತ್ರನ ವರ್ಗಾವಣೆ ಪತ್ರ (ಟಿಸಿ) ಪಡೆದು ಬೇರೆ ಶಾಲೆಗೆ ದಾಖಲಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಗರದ ನಿವಾಸಿ, ಲಿಂಗಾಯತ ಧರ್ಮ ಮಹಾಸಭಾ ರಾಜ್ಯಾಧ್ಯಕ್ಷ ವೀರಣ್ಣ ಕೊರ್ಲಹಳ್ಳಿ ತಮ್ಮ ಪುತ್ರನ ವರ್ಗಾವಣೆ ಪತ್ರ ಪಡೆದು ಬೇರೆ ಶಾಲೆಗೆ ದಾಖಲಿಸಿದ್ದಾರೆ.
ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದಲ್ಲಿನ ವಿದ್ಯಾರ್ಥಿಗಳಲ್ಲಿ ಅತಿಯಾದ ಅಪೌಷ್ಟಿಕತೆ ಇರುವುದನ್ನು ಮನಗೊಂಡು ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸುವ ಯೋಜನೆ ಆರಂಭಿಸಿದೆ. ಇದಕ್ಕೆ ಮಠಾಧೀಶರು, ಸ್ವಾಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆಯ ಮಧ್ಯೆದಲ್ಲಿ ವೀರಣ್ಣ ಕೊರ್ಲಹಳ್ಳಿ ಅವರು ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ಕೊಡುವ ಯೋಜನೆ ಆರಂಭಿಸಿದ ಕಾರಣಕ್ಕೆ ಪುತ್ರನ ಟಿಸಿ ಹಿಂಪಡೆದು ಬೇರೆ ಶಾಲೆಗೆ ದಾಖಲಿಸಿದ್ದಾರೆ. ಅವರ ಪುತ್ರನನ್ನು ಕೊಪ್ಪಳದಲ್ಲಿ ಸರ್ಕಾರಿ ಶಾಲೆಯಲ್ಲಿ 1ನೇ ತರಗತಿಗೆ ದಾಖಲಿಸಿದ್ದರು. ಮೊಟ್ಟೆ ಕೊಡುವ ಕಾರಣಕ್ಕೆ ಅದು ನನ್ನ ಧರ್ಮ, ಸಂಸ್ಕೃತಿಗೆ ಅಡ್ಡಿಯಾಗುತ್ತಿದೆ ಎಂದು ಹೇಳಿದ್ದಾರೆ.
ಸರ್ಕಾರ ಮೊಟ್ಟೆ ಕೊಡುವ ಯೋಜನೆ ಒಳ್ಳೆಯದು ಇರಬಹುದು. ಒಂದೇ ಮಾದರಿ ಯೋಜನೆ ತರಬೇಕು. ಒಬ್ಬರಿಗೆ ಮೊಟ್ಟೆ ಕೊಡುವುದು ಇನ್ನೊಬ್ಬರಿಗೆ ಬಾಳೆ ಹಣ್ಣು ಕೊಡುವುದು ತರವಲ್ಲ. ಎಲ್ಲರಿಗೂ ಬಾಳೆಹಣ್ಣು ಕೊಡ ಬಹುದಿತ್ತು. ಮೊಟ್ಟೆಯನ್ನೇ ಕೊಡಬೇಕೆಂದಿಲ್ಲ. ಸರ್ಕಾರದ ಈ ನಿರ್ಧಾರ ನಮ್ಮ ಧರ್ಮ, ಸಂಸ್ಕೃತಿಗೆ ಅಡ್ಡಿ ಬರುತ್ತಿರುವ ಹಿನ್ನೆಲೆಯಲ್ಲಿ ನಾವು ನನ್ನ ಮಗನ ಟಿಸಿ ಹಿಂಪಡೆದು ಬೇರೆಡೆ ದಾಖಲಿಸಿರುವೆ ಎಂದು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ