ಕೇರಳದಲ್ಲಿ ಖ್ಯಾತ ಓಟಗಾರ್ತಿ ಪಿ.ಟಿ. ಉಷಾ ವಿರುದ್ಧ ವಂಚನೆ ಪ್ರಕರಣ ದಾಖಲು

ಮಾಜಿ ಅಥ್ಲೀಟ್ ಜೆಮ್ಮಾ ಜೋಸೆಫ್ ನೀಡಿದ ದೂರಿನ ಆಧಾರದ ಮೇಲೆ ಕೇರಳದ ಕೋಝಿಕ್ಕೋಡ್ ಪೊಲೀಸರು ಭಾರತದ ಚಿನ್ನದ ಹುಡುಗಿ ಎಂದೇ ಖ್ಯಾತರಾದ ಪಿ.ಟಿ. ಉಷಾ ಮತ್ತು ನಿರ್ಮಾಣ ಉದ್ಯಮದ ಇತರ ಆರು ಸದಸ್ಯರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಜೆಮ್ಮಾ ಅವರು ತಮ್ಮ ಮನೆ ನಿರ್ಮಾಣ ಮಾಡಿಕೊಡಲು ಶುಲ್ಕ ಪಾವತಿಸಿದ್ದಾರೆ, ಆದರೆ ಭರವಸೆ ನೀಡಿದಂತೆ ಸಮಯಕ್ಕೆ ಸರಿಯಾಗಿ ಮನೆ ನಿರ್ಮಾಣ ಪೂರ್ಣಗೊಳಿಸಲಿಲ್ಲ ಎಂದು ಆರೋಪಿಸಿ ದೂರು ಸಲ್ಲಿಸಿದ್ದಾರೆ.
ಜೆಮ್ಮಾ ವೆಲ್ಲಾಯಿಲ್ ಪೊಲೀಸರಿಗೆ ದೂರು ನೀಡಿದ್ದು, ಅವರು ಅದನ್ನು ಸಂಪೂರ್ಣ ತನಿಖೆಗಾಗಿ ಕೋಝಿಕ್ಕೋಡ್ ಪೊಲೀಸ್ ಮುಖ್ಯಸ್ಥ ಎ.ವಿ. ಜಾರ್ಜ್ ಅವರಿಗೆ ಸಲ್ಲಿಸಿದ್ದಾರೆ. ಈ ಸಮಸ್ಯೆಯನ್ನು ದೂರುದಾರರು ಕೇರಳ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಮುಂದೆಯೂ ಮಂಡಿಸಿದ್ದರು.
ಫ್ಲ್ಯಾಟ್‌ಗಾಗಿ ಪಿ.ಟಿ.ಉಷಾ ಅವರಿಗೆ 46 ಲಕ್ಷ ರೂ.ಗಳನ್ನು ಪಾವತಿಸಿದ್ದು, ನಿಗದಿತ ಸಮಯಕ್ಕೆ ಕಟ್ಟಡವನ್ನು ಪೂರ್ಣಗೊಳಿಸುವುದಾಗಿ ತಿಳಿಸಲಾಗಿತ್ತು ಎಂದು ಜೆಮ್ಮಾ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಅಪಾರ್ಟ್ಮೆಂಟ್ ಪೂರ್ಣಗೊಂಡಿಲ್ಲ, ಮತ್ತು ನಿರ್ಮಾಣ ಕಂಪನಿಯೂ ಹಣವನ್ನು ಹಿಂದಿರುಗಿಸಲು ಸಿದ್ಧವಿಲ್ಲ. ದೂರುದಾರರು ಬಿಲ್ಡರ್‌ಗಳನ್ನು ಸಂಪರ್ಕಿಸಿದಾಗ, ಹಣವನ್ನು ಮರುಪಾವತಿಸುವುದು ಪಿ.ಟಿ. ಉಷಾ ಅವರ ಜವಾಬ್ದಾರಿ ಎಂದು ಅವರು ಹೇಳಿಕೊಂಡರು, ಆದರೆ ಮಾಜಿ ರಾಷ್ಟ್ರೀಯ ಅಥ್ಲೀಟ್ ಹಣ ಮರುಪಾವತಿ ಮಾಡಲು ನಿರಾಕರಿಸಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಶುಕ್ರವಾರ, ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ ಮತ್ತು ಅಪ್ರಾಮಾಣಿಕತೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಶೀಘ್ರದಲ್ಲೇ ತನಿಖೆಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ. ಕೇರಳ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ನೀಡಿದ ಮಾಹಿತಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ.

ಪ್ರಮುಖ ಸುದ್ದಿ :-   127 ವರ್ಷಗಳಷ್ಟು ಹಳೆಯ ಗೋದ್ರೇಜ್ ಗ್ರುಪ್‌ ಇಬ್ಭಾಗ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement