ವಿಧಾನಸಭೆಯಲ್ಲಿ ವಿಪಕ್ಷಗಳ ಕೋಲಾಹಲ, ಗದ್ದಲ

ಬೆಳಗಾವಿ: ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರ ಭೂ ಹಗರಣದ ಬಗ್ಗೆ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡುವಂತೆ ಕಾಂಗ್ರೆಸ್ ಸದಸ್ಯರು ಇಂದು, ಸೋಮವಾರ ಸಹ ವಿಧಾನಸಭೆಯಲ್ಲಿ ಧರಣಿ ಮುಂದುವರೆಸಿದರು.
ಜೆಡಿಎಸ್ ಸದಸ್ಯರು ಎಂಇಎಸ್‌ನ ಪುಂಡಾಟಿಕೆ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು. ಸದನದಲ್ಲಿ ಗದ್ದಲ, ಕೋಲಾಹಲದ ವಾತಾವರಣ ರೂಪುಗೊಂಡಿತಾದರೂ ಈ ಗದ್ದಲದ ನಡುವೆಯೇ ಸಭಾಧ್ಯಕ್ಷರು ಪ್ರಶ್ನೋತ್ತರ ಕಲಾಪ ನಡೆಸಿ ನಂತರ ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.
ಇಂದು ವಿಧಾನಸಭೆ ಆರಂಭವಾಗುತ್ತಿದ್ದಂತೆಯೇ ಕಳೆದ ಎರಡು ದಿನಗಳ ಹಿಂದೆ ನಿಧನರಾದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರಿಗೆ ಸಂತಾಪ ಸಲ್ಲಿಸುವ ಕಲಾಪ ಮುಗಿದ ತಕ್ಷಣವೇ ಕಾಂಗ್ರೆಸ್ ಸದಸ್ಯರು ಕಳೆದ ಶುಕ್ರವಾರ ಆರಂಭಿಸಿದ ಧರಣಿ ಮುಂದುವರೆಸಿ, ಸಚಿವ ಬೈರತಿ ಬಸವರಾಜು ಭೂ ಹಗರಣದ ಬಗ್ಗೆ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದರು.
ಈ ನಡುವೆ ಜೆಡಿಎಸ್ ಸದಸ್ಯರು ಕನ್ನಡದ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಎಂಇಎಸ್‌ನ ಪುಂಡಾಡಿಕೆ ಮಿತಿಮೀರಿದೆ. ಈ ಬಗ್ಗೆ ಎಲ್ಲ ಕಲಾಪಗಳನ್ನು ಬದಿಗೊತ್ತಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಏರು ದ್ವನಿಯಲ್ಲಿ ಒತ್ತಾಯಿಸಿದ್ದರಿಂದ ಸದನದಲ್ಲಿ ಗದ್ದಲ, ಕೋಲಾಹಲದ ವಾತಾವರಣ ರೂಪುಗೊಂಡಿತು.
ಈ ಗದ್ದಲದ ನಡುವೆಯೇ ಮಾತನಾಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸ್ ಸದಸ್ಯರಿಗೆ ಧರಣಿಯನ್ನು ಕೈಬಿಡಿ ಎಂದು ಮನವಿ ಮಾಡಿದರಾದರೂ ಅದಕ್ಕೆ ಒಪ್ಪದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡಬೇಕು. ಅಲ್ಲಿವರೆಗೂ ಧರಣಿಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಈ ರೀತಿ ಕಾಂಗ್ರೆಸ್‌ನವರು ನಡೆದುಕೊಳ್ಳುವುದು ಸರಿಯಲ್ಲ. ಈ ಬಗ್ಗೆ ಸಭಾಧ್ಯಕ್ಷರಾಗಿ ನೀವು ರೂಲಿಂಗ್ ನೀಡಿದ್ದೀರಿ ಎಂದು ಹೇಳಿದರು.
ಕಾಂಗ್ರೆಸ್ ಸದಸ್ಯರ ಧರಣಿ ಹಾಗೂ ಜೆಡಿಎಸ್ ಸದಸ್ಯರ ಒತ್ತಾಯದ ನಡುವೆಯೇ ಸಭಾಧ್ಯಕ್ಷರು ಪ್ರಶ್ನೋತ್ತರ ಕಲಾಪ ನಡೆಸಿದರು.
ಧರಣಿ ನಿರತರ ಕಾಂಗ್ರೆಸ್ ಸದಸ್ಯರು ಪ್ರಶ್ನೆ ಕೇಳದ ಕಾರಣ ಪ್ರಶ್ನೋತ್ತರ ಕಲಾಪ ೩-೪ ಪ್ರಶ್ನೆ, ಉತ್ತರಗಳಿಗಷ್ಟೇ ಸೀಮಿತವಾಗಿ ಕಲಾಪ ಪೂರ್ಣಗೊಂಡಿತು.
ಪ್ರಶ್ನೋತ್ತರ ಕಲಾಪ ಸಂದರ್ಭದಲ್ಲೇ ಕಾಂಗ್ರೆಸ್ ಸದಸ್ಯರು ಧಿಕ್ಕಾರದ ಘೋಷಣೆಗಳು, ಜೆಡಿಎಸ ಸದಸ್ಯರ ಘೋಷಣೆಗಳು ಮುಂದುವರೆದಿದ್ದು ಗದ್ದಲದಲ್ಲಿಯೇ ಪ್ರಶ್ನೋತ್ತರ ನಡೆಯಿತು.
ಪ್ರಶ್ನೋತ್ತರ ಕಲಾಪ ಮುಗಿಯುತ್ತಿದ್ದಂತೆಯೇ ವಿಧಾನಸಭಾಧ್ಯಕ್ಷ ಕಾಗೇರಿ ಮತ್ತೆ ಕಾಂಗ್ರೆಸ್ ಸದಸ್ಯರಿಗೆ ಧರಣಿ ಕೈಬಿಡುವಂತೆ ಮನವಿ ಮಾಡಿ, ಕಳೆದ ೩-೪ ದಿನಗಳಿಂದ ನಡೆದಿರುವ ಘಟನೆಗಳ ಬಗ್ಗೆ ಚರ್ಚೆ ಮಾಡಬೇಕಿದೆ ಅದಕ್ಕೆ ಅವಕಾಶ ನೀಡಿ ಎಂದು ಮನವಿ ಮಾಡಿದರೂ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು, ಬೈರತಿ ಬಸವರಾಜು ಭೂಹಗರಣದ ಬಗ್ಗೆ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದರು.
ಈ ಹಂತದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಸದಸ್ಯರು ಹಾಗೂ ಜೆಡಿಎಸ್ ಸದಸ್ಯರುಗಳ ನಡುವೆ ಮಾತಿನ ಚಕಮಕಿ ನಡೆದು, ಸದನದಲ್ಲಿ ಗದ್ದಲ ತಾರಕ್ಕಕೇರಿತ್ತು.
ಸದನದಲ್ಲಿ ಗದ್ದಲ ತಾರಕಕ್ಕೇರಿ ಕಾವೇರಿದ ವಾತಾವರಣ ಉಂಟಾಗಿದ್ದರಿಂದ ವಿಧಾನಸಭಾಧ್ಯಕ್ಷರು ಸದನವನ್ನು ಮಧ್ಯಾಹ್ನ ೨:೩೦ ಕ್ಕೆ ಮುಂದೂಡಿದರು.

ಪ್ರಮುಖ ಸುದ್ದಿ :-   ಪೋಕ್ಸೋ ಪ್ರಕರಣ : ಮುರುಘಾ ಶರಣರ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement