ದೆಹಲಿಯ ಮೊಹಲ್ಲಾ ಕ್ಲಿನಿಕ್ ವೈದ್ಯರು ಬರೆದುಕೊಟ್ಟ ಕೆಮ್ಮು ನಿವಾರಕ ಔಷಧಿ ಸೇವಿಸಿ ಮೂರು ಮಕ್ಕಳು ಸಾವು: ಮೂವರು ವೈದ್ಯರ ಅಮಾನತು

ನವದೆಹಲಿ: ಮೊಹಲ್ಲಾ ಕ್ಲಿನಿಕ್ ವೈದ್ಯರು ನೀಡಿದ್ದ ಕೆಮ್ಮು ನಿವಾರಕ ಔಷಧಿ ಸೇವಿಸಿ ಮೂವರು ಮಕ್ಕಳು ಮೃತಪಟ್ಟ ಘಟನೆ ದೆಹಲಿಯ ಕಲಾವತಿ ಸರನ್ ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಮೂವರು ವೈದ್ಯರ ಸೇವೆಯನ್ನು ವಜಾಗೊಳಿಸಿ ತನಿಖೆಗೆ ಆದೇಶಿಸುವಂತೆ ದೆಹಲಿ ಸರ್ಕಾರ ಸೂಚಿಸಿದೆ. ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ರಾಜೀನಾಮೆ ನೀಡಬೇಕು ಮತ್ತು ಮೂವರು ಮಕ್ಕಳ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಒತ್ತಾಯಿಸಿವೆ.
ಅಧಿಕಾರಿಗಳ ಪ್ರಕಾರ, ಕೇಂದ್ರದ ಕಲಾವತಿ ಸರನ್ ಮಕ್ಕಳ ಆಸ್ಪತ್ರೆಯು ಜೂನ್ 29 ರಿಂದ ನವೆಂಬರ್ 21 ರವರೆಗೆ ಒಂದರಿಂದ ಆರು ವರ್ಷದೊಳಗಿನ ಮಕ್ಕಳಲ್ಲಿ ಡೆಕ್ಸ್ಟ್ರೋಮೆಥಾರ್ಫಾನ್ (dextromethorphan)ವಿಷದ 16 ಪ್ರಕರಣಗಳನ್ನು ವರದಿ ಮಾಡಿದೆ.”ಹೆಚ್ಚಿನ ಮಕ್ಕಳು ಉಸಿರಾಟ ಕ್ಷೀಣದಿಂದ ಬಳಲುತ್ತಿದ್ದಾರೆ ಎಂದು ದೂರಿದ್ದಾರೆ. ಮೃತಪಟ್ಟ ಮೂವರು ಮಕ್ಕಳು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆ.
ಮಕ್ಕಳ ಸಾವಿನ ಹಿನ್ನೆಲೆಯಲ್ಲಿ ನಗರಾಡಳಿತ ಮೂವರು ವೈದ್ಯರನ್ನು ವಜಾಗೊಳಿಸಿದೆ ಎಂದು ಆರೋಗ್ಯ ಸಚಿವ ಜೈನ್ ಹೇಳಿದ್ದಾರೆ. ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ದೆಹಲಿ ಸರ್ಕಾರ ಸೋಮವಾರ ನಾಲ್ಕು ಸದಸ್ಯರ ತನಿಖಾ ಸಮಿತಿಯನ್ನು ಸಹ ರಚಿಸಿದೆ. ಚೀಫ್ ಡಿಸ್ಟ್ರಿಕ್ಟ್ ಮೆಡಿಕಲ್ ಆಫೀಸರ್ (ಆಗ್ನೇಯ ದೆಹಲಿ) ಡಾ. ಗೀತಾ ಸಮಿತಿಯ ಮುಖ್ಯಸ್ಥರಾಗಿದ್ದು, ಏಳು ದಿನಗಳಲ್ಲಿ ವರದಿಯನ್ನು ಸಲ್ಲಿಸಲು ಕೇಳಲಾಗಿದೆ.
ಡೆಕ್ಸ್ಟ್ರೋಮೆಥೋರ್ಫಾನ್ ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಕೆಮ್ಮು ನಿವಾರಕಗಳಲ್ಲಿ ಒಂದಾಗಿದೆ. ಆದಾಗ್ಯೂ, ಇದು ದುರುಪಯೋಗಕ್ಕೆ ಒಳಗಾಗುತ್ತದೆ. ಔಷಧದ ಹೆಚ್ಚಿನ ಪ್ರಮಾಣದ ಸೇವನೆಯು ನಿದ್ರಾಹೀನತೆ, ಹಿಗ್ಗಿದ ಕಣ್ಣು, ತಲೆತಿರುಗುವಿಕೆ, ವಾಕರಿಕೆ, ಚಡಪಡಿಕೆ, ನಿಧಾನವಾದ ಉಸಿರಾಟ ಮತ್ತು ಅತಿಸಾರ ಇತ್ಯಾದಿಗಳಿಗೆ ಕಾರಣವಾಗಬಹುದು.
ಡಿಸೆಂಬರ್ 7 ರಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ಡೈರೆಕ್ಟರೇಟ್ ಜನರಲ್ ಹೆಲ್ತ್ ಸರ್ವಿಸಸ್‌ನ ಡಾ.ಸುನೀಲ್ ಕುಮಾರ್ ಅವರು ದೆಹಲಿ ಸರ್ಕಾರಕ್ಕೆ ಪತ್ರ ಬರೆದಿದ್ದು, ಡಿಸ್ಪೆನ್ಸರಿಗಳು ಮತ್ತು ಮೊಹಲ್ಲಾ ಚಿಕಿತ್ಸಾಲಯಗಳಲ್ಲಿ ವೈದ್ಯರು 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಡೆಕ್ಸ್ಟ್ರೋಥೋರ್ಫಾನ್ ಅನ್ನು ಶಿಫಾರಸು ಮಾಡುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯಿಂದ ಒಮೆಗಾ ಫಾರ್ಮಾ ತಯಾರಿಸಿದ ಔಷಧವನ್ನು ಹಿಂಪಡೆಯುವಂತೆ ಡಾ ಕುಮಾರ್ ಸರ್ಕಾರಕ್ಕೆ ಸೂಚಿಸಿದರು.
ಕಲಾವತಿ ಸರನ್ ಮಕ್ಕಳ ಆಸ್ಪತ್ರೆಯಲ್ಲಿ 16 ಡೆಕ್ಸ್ಟ್ರೋಮೆಥೋರ್ಫಾನ್ ವಿಷದ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಮೂರು ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಈ ಮೂಲಕ ತಿಳಿಸಲಾಗಿದೆ. ಈ ಮಕ್ಕಳಿಗೆ ದೆಹಲಿ ಸರ್ಕಾರದ ಮೊಹಲ್ಲಾ ಚಿಕಿತ್ಸಾಲಯಗಳು ಡೆಕ್ಸ್ಟ್ರೋಮೆಥೋರ್ಫಾನ್ ಔಷಧವನ್ನು ಶಿಫಾರಸು ಮಾಡಿದ್ದು, ಕಿರಿಮಕ್ಕಳ ವಯಸ್ಸಿಗೆ ಈ ಔಷಧವನ್ನು ಕಟ್ಟುನಿಟ್ಟಾಗಿ ಶಿಫಾರಸು ಮಾಡಬಾರದು ಎಂದು ಪತ್ರದಲ್ಲಿ ಹೇಳಲಾಗಿದೆ.
ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಕೇಜ್ರಿವಾಲ್ ಮತ್ತು ಜೈನ್ ರಾಜೀನಾಮೆ ನೀಡಬೇಕು ಮತ್ತು ಮೃತ ಮಕ್ಕಳ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು. ಮೃತ ಮೂರು ಮಕ್ಕಳ ಕುಟುಂಬಕ್ಕೆ ₹ 1 ಕೋಟಿ ಪರಿಹಾರ ಹಾಗೂ ಇತರ 13 ಮಕ್ಕಳಿಗೆ ₹ 10 ಲಕ್ಷ ಧನಸಹಾಯ ನೀಡಬೇಕು ಎಂದು ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಒತ್ತಾಯಿಸಿದ್ದಾರೆ.

ಪ್ರಮುಖ ಸುದ್ದಿ :-   ರಾಜಕೀಯದಿಂದ ಮತ್ತೆ ನಟನೆಗೆ ; 'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ 2ʼ ಮೂಲಕ ಮತ್ತೆ ಕಿರುತೆರೆಗೆ ಬಂದ ಸ್ಮೃತಿ ಇರಾನಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement