ಐಸಿಸ್‌, ಬೋಕೋ ಹರಾಂಗೆ ಹಿಂದುತ್ವ ಹೋಲಿಕೆ: ಸಲ್ಮಾನ್ ಖುರ್ಷಿದ್ ವಿರುದ್ಧ ಎಫ್ಐಆರ್ ದಾಖಲಿಸಲು ಉತ್ತರ ಪ್ರದೇಶ ಕೋರ್ಟ್‌ ಆದೇಶ

ಲಕ್ನೋ: ತಮ್ಮ ‘ಸನ್‌ರೈಸ್ ಓವರ್ ಅಯೋಧ್ಯಾ: ನೇಷನ್‌ಹುಡ್ ಇನ್ ಅವರ್ ಟೈಮ್ಸ್ʼ ಕೃತಿಯಲ್ಲಿ ಹಿಂದುತ್ವವನ್ನು ಬೋಕೋ ಹರಾಮ್ ಮತ್ತು ಐಸಿಸ್‌ನಂತಹ ಭಯೋತ್ಪಾದಕ ಸಂಘಟನೆಗಳಿಗೆ ಹೋಲಿಸಿದ ಆರೋಪದ ಮೇಲೆ ಹಿರಿಯ ವಕೀಲ ಹಾಗೂ ಕಾಂಗ್ರೆಸ್‌ ನಾಯಕ ಸಲ್ಮಾನ್ ಖುರ್ಷಿದ್ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಲಕ್ನೋ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಉತ್ತರ ಪ್ರದೇಶ ಪೊಲೀಸರಿಗೆ ಆದೇಶಿಸಿದೆ.
ಎಫ್‌ಐಆರ್ ದಾಖಲಿಸಿ ಮೂರು ದಿನಗಳ ಒಳಗಾಗಿ ಎಫ್‌ಐಆರ್‌ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಮತ್ತು ಸೂಕ್ತ ಸೆಕ್ಷನ್‌ಗಳನ್ನು ವಿಧಿಸಿ ತನಿಖೆ ನಡೆಸುವಂತೆ ನ್ಯಾಯಾಂಗ ಅಧಿಕಾರಿಗಳಿಗೆ ಅಡಿಷನಲ್‌ ಚೀಫ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್ ಶಾಂತನು ತ್ಯಾಗಿ ಸೂಚಿಸಿದ್ದಾರೆ.
ಕೃತಿಯ ಕೆಲ ಭಾಗಗಳು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆರೋಪಿಸಿ ಶುಭಾಂಗಿ ತ್ಯಾಗಿ ಎಂಬವವರು ದೂರು ದಾಖಲಿಸಿದ್ದರು. ಎಫ್‌ಐಆರ್‌ ದಾಖಲಿಸುವಂತೆ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಈ ಮೊದಲು ದೆಹಲಿ ಹೈಕೋರ್ಟ್‌ ಮುಂದೆಯೂ ಸಹ ಖುರ್ಷಿದ್‌ ಅವರ ಪುಸ್ತಕವನ್ನು ನಿಷೇಧಿಸುವಂತೆ ಕೋರಿ ಅರ್ಜಿಯೊಂದು ದಾಖಲಾಗಿತ್ತು. ಆದರೆ ನ.25ರಂದು ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಪ್ರಕರಣದ ವಿಚಾರಣೆಯನ್ನು ನಡಸಿದ್ದ ನ್ಯಾ. ಯಶ್ವಂತ್ ವರ್ಮ ಅವರು ಒಂದು ವೇಳೆ ಜನರಿಗೆ ಪುಸ್ತಕ ಇಷ್ಟವಾಗಲಿಲ್ಲ ಎಂದರೆ ಅವರಿಗೆ ಅದನ್ನು ಕೊಳ್ಳದೆ ಇರುವ ಆಯ್ಕೆ ಇದೆ ಎಂದು ತಿಳಿಸಿದ್ದರು.

ಪ್ರಮುಖ ಸುದ್ದಿ :-   ಉದ್ಯಮಿ, ಬಿಜೆಪಿ ನಾಯಕ ಗೋಪಾಲ ಖೇಮ್ಕಾ ಹತ್ಯೆ ಪ್ರಕರಣ ; ಅವರ ಅಂತ್ಯಕ್ರಿಯೆಗೆ ಹಾರ ಹಿಡಿದುಕೊಂಡು ಬಂದ ಆರೋಪಿ...!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement