ಕಾಂಗ್ರೆಸ್ ಸರ್ಕಾರ ಮತಾಂತರ ಬಿಲ್ ತರಲು ತಯಾರಿ ನಡೆಸಿತ್ತು ಎಂಬ ಬಿಜೆಪಿ ಆರೋಪಕ್ಕೆ ಉತ್ತರ ನೀಡಿದ ಸಿದ್ದರಾಮಯ್ಯ

ಬೆಳಗಾವಿ: 2016ರಲ್ಲಿ ಕಾಂಗ್ರೆಸ್ ಸರ್ಕಾರ ಮತಾಂತರ ಬಿಲ್ ತರಲು ತಯಾರಿ ನಡೆಸಿತ್ತು. ಅದನ್ನು ತಡೆದಿದ್ದು ಸೋನಿಯಾ ಗಾಂಧಿ. ಕುರ್ಚಿಗೆ ಕಂಟಕ ಬರುತ್ತದೆಯೆಂಬ ಭಯದಲ್ಲಿ ಸಿದ್ದರಾಮಯ್ಯ ಈ ಮಸೂದೆ ಜಾರಿಗೆ ಮುಂದಾಗಲಿಲ್ಲ ಎಂದು ಬಿಜೆಪಿ ಆರೋಪಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಬಲವಂತವಾಗಿ, ಆಸೆ ಆಮಿಷ ಒಡ್ಡಿ ಅಥವಾ ಮೋಸದಿಂದ ಮತಾಂತರ ಮಾಡಿದರೆ ಅದು ಶಿಕ್ಷಾರ್ಹ ಅಪರಾಧ ಎಂದು ನಮ್ಮ ಸಂವಿಧಾನದಲ್ಲೇ ಸ್ಪಷ್ಟವಾಗಿ ಇರುವುದರಿಂದ ರಾಜ್ಯ ಬಿಜೆಪಿ ಸರ್ಕಾರಕ್ಕೆ ಹೊಸ ಮತಾಂತರ ನಿಷೇಧ ಕಾಯ್ದೆಯ ಅಗತ್ಯವೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಫೇಸ್‌ಬುಕ್‌ ಪೋಸ್ಟ್‌ ಮಾಡಿರುವ ಅವರು,  ಮಾಡಿರುವ ಅವರು, ಕರಡನ್ನು ನಾವು ಸಚಿವ ಸಂಪುಟದ ಮುಂದಿಟ್ಟು ಚರ್ಚೆ ಮಾಡಿಲ್ಲ, ಅನುಮೋದನೆಯನ್ನೂ ನೀಡಿಲ್ಲ. ಮುಖ್ಯಮಂತ್ರಿ ಈ ರೀತಿ ಸಂಪುಟ ಚರ್ಚೆಗೆ ತನ್ನಿ ಎಂದ ಅನೇಕ ವಿಷಯಗಳು, ಕಡತಗಳು ತಿರಸ್ಕರಿಸಲ್ಪಟ್ಟಿವೆ, ಅವೆಲ್ಲವೂ ಸರ್ಕಾರದ ನಿಲುವು ಆಗುವುದಿಲ್ಲ. ಕೆಲವು ಮುಂದೂಡಲ್ಪಟ್ಟಿವೆ, ಇನ್ನು ಕೆಲವು ಸಂಪುಟ ಉಪ ಸಮಿತಿಗೆ ಹೋಗಿವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸಂಸದೀಯ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ಎಂದರೆ ಸಮಾನರಲ್ಲಿ ಮೊದಲಿಗ ಎಂಬ ವ್ಯಾಖ್ಯಾನವಿದೆ. ಮುಖ್ಯಮಂತ್ರಿಯಾಗಿ ನಾನೊಬ್ಬನೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲು ಬರುವುದಿಲ್ಲ, ಕರಡು ಪ್ರತಿ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿ ಎಂಬ ಕಾರಣಕ್ಕೆ ಸಹಿ ಮಾಡಿದ್ದೆ. ಸಹಿ ಮಾಡಿದ ಮಾತ್ರಕ್ಕೆ ಒಪ್ಪಿದ್ದೆ ಎಂದು ಅರ್ಥವಲ್ಲ. ನಾನು ಮತಾಂತರ ನಿಷೇಧ ಕಾಯಿದೆಯ ಕಡತವನ್ನು ಸಂಪುಟದ ಮುಂದೆ ತರುವಂತೆ ಸಹಿ ಹಾಕಿದ್ದು 2015 ರ ನವೆಂಬರ್ ತಿಂಗಳಿನಲ್ಲಿ. ಇದಾಗಿ ಎರಡೂವರೆ ವರ್ಷ ನಾವು ಅಧಿಕಾರದಲ್ಲಿ ಇದ್ದರೂ ಒಮ್ಮೆಯೂ ಅದನ್ನು ಸಂಪುಟದ ಮುಂದೆ ತರುವ ಪ್ರಯತ್ನ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೈಂಗಿಕ ದೌರ್ಜನ್ಯ ಪ್ರಕರಣ: ಶಾಸಕ ಎಚ್‌.ಡಿ. ರೇವಣ್ಣಗೆ ಜಾಮೀನು ಮಂಜೂರು

ಈ ಹಿಂದಿನ ಕರಡು ಪ್ರತಿಗೂ, ಈಗಿನ ಕರಡು ಮಸೂದೆಗೂ ಬಹಳಷ್ಟು ವ್ಯತ್ಯಾಸಗಳಿವೆ. ಮದುವೆ ಎಂಬ ಪದ ಹೊಸದಾಗಿ ಸೇರಿಸಲಾಗಿದೆ, ಸಾಕ್ಷಾಧಾರ ಕೊರತೆ ಎದುರಾದಾಗ ದೂರುದಾರರಿಗೆ ಅನುಕೂಲವಾಗುವಂತೆ ನಿಯಮ ರೂಪಿಸಲಾಗಿದೆ. ಕಾರಣ ನಮ್ಮ ಸರ್ಕಾರಕ್ಕೆ ಇಂಥಾ ಮಸೂದೆಯ ಬಗ್ಗೆ ಆಸಕ್ತಿ ಇರಲಿಲ್ಲ.
ಸಾಮಾನ್ಯರು ಮತಾಂತರವಾದಾಗ ಒಂದು ಶಿಕ್ಷೆ, ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಅಪ್ರಾಪ್ತರು, ಬುದ್ದಿಭ್ರಮಣೆಯಾದವರನ್ನು ಮತಾಂತರ ಮಾಡಿದಾಗ ಗರಿಷ್ಠ ಶಿಕ್ಷೆ ವಿಧಿಸಲಾಗಿದೆ. ಆದರೆ ಇಂತಹುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಕಾನೂನಿನ ಎದುರು ಸರ್ವರೂ ಸಮಾನರು.
ಕಾನೂನು ಇಲಾಖೆ ಮೂಲಕ ಬಂದಿದ್ದ ಮತಾಂತರ ನಿಷೇಧ ಕಾಯ್ದೆಯ ಕರಡನ್ನು ನಮ್ಮ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಹೆಚ್.ಆಂಜನೇಯ ಅವರು ಸಂಪುಟದ ಮುಂದೆ ತರುವ ಅಗತ್ಯವಿಲ್ಲ ಎಂದು ಷರಾ ಬರೆದು ತಿರಸ್ಕರಿಸಿದ್ದರು.
ತಿರಸ್ಕೃತಗೊಂಡ ಕರಡು ಕಾಯ್ದೆ ನಮ್ಮ ಸರ್ಕಾರದ ಕಾಲಾವಧಿಯಲ್ಲಿ ಮತ್ತೆಂದೂ ಚರ್ಚೆಗೆ ಬರಲಿಲ್ಲ. ನಮಗೆ ಇಂಥದ್ದೊಂದು ಕಾಯ್ದೆ ತರುವ ಬಗ್ಗೆ ಕಾಳಜಿ ಇದ್ದಿದ್ದರೆ 2015 ರ ನವೆಂಬರ್ ನಲ್ಲಿ ಸಹಿ ಹಾಕಿ ಸಂಪುಟ ಚರ್ಚೆಗೆ ಕಳುಹಿಸಿದ್ದ ಕಡತ, ತಿರಸ್ಕಾರಗೊಂಡ ನಂತರ ಎರಡೂವರೆ ವರ್ಷ ನಾವು ಅಧಿಕಾರದಲ್ಲಿ ಇದ್ದರೂ ಒಮ್ಮೆಯೂ ಅದರ ಕಡೆ ಗಮನ ನೀಡದೆ ಇರುತ್ತಿದ್ದೆವಾ ಎಂದು ಅವರು ಪೋಸ್ಟ್‌ ನಲ್ಲಿ ಬರೆದಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ಆರ್ ಎಸ್ ಎಸ್ ಕೈವಾಡದಿಂದ ರೂಪುಗೊಂಡಿದ್ದರಲ್ಲಿ ಅನುಮಾನವೇ ಇಲ್ಲ. ಗುಜರಾತ್, ಉತ್ತರ ಪ್ರದೇಶ ಮತ್ತು ಕರ್ನಾಟಕ ಎಲ್ಲಾ ರಾಜ್ಯಗಳ ಕಾನೂನು ಒಂದೇ ರೀತಿಯ ಪದಬಳಕೆಯಿಂದ ಕೂಡಿದೆ. ಒಬ್ಬರೇ ಮೂರೂ ಕರಡು ಕಾಯ್ದೆಗಳನ್ನು ತಯಾರು ಮಾಡಿದಂತಿದೆ.
ನಾವು ಸಂವಿಧಾನದ ಆಶಯಕ್ಕನುಗುಣವಾಗಿ ಕಾಯ್ದೆಯನ್ನು ವಿರೋಧ ಮಾಡಿದ್ದೇವೆ. ಯಾರ ಪರ-ವಿರೋಧವೂ ಇಲ್ಲ. ಇದು ಒಂದೆರಡು ಧರ್ಮಗಳನ್ನು ಗುರಿಯಾಗಿರಿಸಿರುವ ಕಾನೂನು. ನಿರುದ್ಯೋಗ, ಭ್ರಷ್ಟಾಚಾರ, ಅತಿವೃಷ್ಟಿ ಪರಿಹಾರ, ಬೆಲೆಯೇರಿಕೆ ಹೀಗೆ ರಾಜ್ಯದಲ್ಲಿ ಹಲವು ಜ್ವಲಂತ ಸಮಸ್ಯೆಗಳಿದ್ದಾವೆ, ಇವುಗಳಿಂದ ಜನರನ್ನು ವಿಮುಖಗೊಳಿಸಲು ಮತಾಂತರ ನಿಷೇಧ ಕಾಯ್ದೆಯನ್ನು ಬಿಜೆಪಿ ಸರ್ಕಾರದ ಜಾರಿಗೊಳಿಸಲು ಹೊರಟಿದೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು: ಮದುವೆ ಮನೆಯಲ್ಲಿ ಲಿಕ್ವಿಡ್ ನೈಟ್ರೋಜನ್ ಪಾನ್‌ ತಿಂದ ಬಾಲಕಿಯ ಹೊಟ್ಟೆಯಲ್ಲಿ ರಂಧ್ರ...!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement