ತೆರಿಗೆ ದಾಳಿ:ಎಸ್‌ಪಿ ನಾಯಕನ ಮನೆಯಲ್ಲಿ 150 ಕೋಟಿ ಅಕ್ರಮ ಹಣ ಪತ್ತೆ, ಹಣ ಎಣಿಸಿ ಎಣಿಸಿ ಸುಸ್ತಾದ ಅಧಿಕಾರಿಗಳು..!

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಸಾಲೆ ಉದ್ಯಮಿಗೆ ಶಾಕ್‌ ನೀಡಿರುವ ಆದಾಯ ತೆರಿಗೆಅಧಿಕಾರಿಗಳು ಪಿಯೂಷ್ ಜೈನ್ ಎಂಬುವರ ಮನೆ ಮೇಲೆ ದಾಳಿ ಮಾಡಿ 150 ಕೋಟಿ ರೂಪಾಯಿ ಅಕ್ರಮ ಹಣ ಪತ್ತೆ ಹಚ್ಚಿದ್ದಾರೆ.
ಉತ್ತರ ಪ್ರದೇಶದ ಕಾನ್ಪುರ, ಮುಂಬೈ ಮತ್ತು ಗುಜರಾತ್‍ನಲ್ಲಿ ದಾಳಿ ನಡೆಯುತ್ತಿದೆ. ತೆರಿಗೆ ವಂಚನೆಗಾಗಿ ಜಿಎಸ್‍ಟಿ (ಸರಕು ಮತ್ತು ಸೇವಾ ತೆರಿಗೆ) ಅಧಿಕಾರಿಗಳು ಈ ದಾಳಿಗಳನ್ನು ಪ್ರಾರಂಭಿಸಿದ್ದಾರೆ. ವಶಪಡಿಸಿಕೊಂಡ ಒಟ್ಟು ಹಣವನ್ನು ಇನ್ನೂ ಎಣಿಕೆ ಮಾಡಲಾಗುತ್ತಿದೆ. ಗುರುವಾರದಿಂದ ದಾಳಿ ಆರಂಭವಾಗಿದ್ದು, ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.
ಆದಾಯ ತೆರಿಗೆ ಕಟ್ಟದೆ ಸರ್ಕಾರಕ್ಕೆ ವಂಚನೆ ಮಾಡಿರುವುದನ್ನು ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ನಕಲಿ ಇನ್‌ವಾಯ್ಸ್ ಹಾಗೂ ಇ – ವೇ ಬಿಲ್‌ಗಳ ಮೂಲಕ ತೆರಿಗೆ ವಂಚನೆ ಮಾಡಿದ ಆರೋಪದಲ್ಲಿ ಕಾನ್ಪುರದಲ್ಲಿರುವ ಪಿಯೂಷ್‌ ಮನೆಯಲ್ಲಿ ಶೋಧ ನಡೆಸಿದ ಅಧಿಕಾರಿಗಳೇ ಬೆಚ್ಚಿ ಬಿದ್ದಿದಾರೆ. ಯಾಕೆಂದರೆ ಈತನ ಮನೆಯಲ್ಲಿನ ಬೀರುಗಳಲ್ಲಿ ನೋಟುಗಳ ಬಂಡಲ್‌ಗಳು ಸಿಕ್ಕಿವೆ. ನಿನ್ನೆ ದಾಳಿ ನಡೆಸಿದ ಅಧಿಕಾರಿಗಳು ಇಂದು ಬೆಳಗಿನ ವೇಳೆಗೆ ಹಣ ಎಣಿಸಿದ್ದು, ಸುಮಾರು 150 ಕೋಟಿ ರೂಪಾಯಿ ಇದೆ ಎಂದು ಮಾಹಿತಿ ನೀಡಿದ್ದಾರೆ.
ಪಿಯೂಷ್ ಜೈನ್ ಅವರ ಮನೆಯಲ್ಲಿ ಮೂರು ನೋಟು ಎಣಿಕೆ ಯಂತ್ರಗಳನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಎರಡು ಬೀರುಗಳಲ್ಲಿ ನೋಟುಗಳ ಬಂಡಲ್‌ಗಳನ್ನು ಜೋಡಿಸಲಾಗಿತ್ತು. ಅವುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ನೋಟುಗಳ ಬಂಡಲ್‌ಗಳನ್ನು ಅಲ್ಲಿಂದ ಸಾಗಿಸಲು ಹತ್ತಾರು ಪೆಟ್ಟಿಗೆಗಳನ್ನೂ ಸಿದ್ಧಪಡಿಸಲಾಗಿದೆ.
ಪಿಯೂಷ್ ಸಮಾಜವಾದಿ ಪಕ್ಷದ ನಾಯಕರಾಗಿದ್ದಾರೆ. ಅವರು ಇತ್ತೀಚೆಗೆ ಸಮಾಜವಾದಿ ಸೆಂಟ್ ಹೆಸರಿನಲ್ಲಿ ಕಂಪನಿ ತೆರೆದು ಸುಗಂಧ ದ್ರವ್ಯದ ವ್ಯವಹಾರವನ್ನು ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನ್ಪುರ, ಗುಜರಾತ್ ಮತ್ತು ಮುಂಬೈ ಸೇರಿದಂತೆ ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಅಧಿಕಾರಿಗಳು ಇನ್ನೂ ಶೋಧ ನಡೆಸುತ್ತಿದ್ದಾರೆ.
ಈ ಹಿಂದೆ ಜಿಎಸ್‍ಟಿ ಪಾವತಿಸದೆ ಸಾಗಣೆಗೆ ಬಳಸಲಾಗಿದ್ದ 200ಕ್ಕೂ ಹೆಚ್ಚು ನಕಲಿ ಇನ್‌ವಾಯ್ಸ್‌ಗಳನ್ನು ಟ್ರಾನ್ಸ್‌ಪೋರ್ಟರ್‌ನ ಗೋದಾಮಿನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಈಗ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಹ ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ಸರಿಯಾಗಿ ಅಡುಗೆ ಮಾಡಲಿಲ್ಲ ಎಂಬ ಕಾರಣಕ್ಕೆ ಅಜ್ಜಿಗೆ ಬರ್ಬರವಾಗಿ ಥಳಿಸಿದ ಮೊಮ್ಮಗ-ಆತನ ಪತ್ನಿ : ವೀಡಿಯೊ ವೈರಲ್‌, ಇಬ್ಬರ ಬಂಧನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement