ಬೆಂಗಳೂರು: ಬೈಕ್ ಕಳುವು ದಂಧೆಗೆ ಪೊಲೀಸ್ ಕಾನ್‌ಸ್ಟೇಬಲ್ ನೇತೃತ್ವ..!

ಬೆಂಗಳೂರು: ಬೆಂಗಳೂರಿನಲ್ಲಿ ಕಳ್ಳತನವಾಗಿದ್ದ 77 ಲಕ್ಷ ಮೌಲ್ಯದ 53 ಬೈಕ್‌ಗಳನ್ನು ಪೊಲೀಸರು ಶುಕ್ರವಾರ ವಶಪಡಿಸಿಕೊಂಡಿದ್ದು, ದಂಧೆಯ ಹಿಂದೆ ಪೊಲೀಸನೇ ಕಿಂಗ್ ಪಿನ್ ಎಂದು ತಿಳಿದು ಬಂದಿದೆ.
ಆರೋಪಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಕ್ರೈಂ ಪೊಲೀಸ್ ಕಾನ್‌ಸ್ಟೆಬಲ್ ಹೊನ್ನಪ್ಪ ದುರದಪ್ಪ ಮಾಳಗಿ ಬೈಕ್ ಕಳುವು ಗ್ಯಾಂಗ್ ನ ನೇತೃತ್ವ ವಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಮೇಶ ಎಂಬಾತನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದು, ಈತ ಕಾನ್‌ಸ್ಟೆಬಲ್ ಮಾಳಗಿ ಜೊತೆ ಈ ಪ್ರಕರಣಗಳಲ್ಲಿ ಸೇರಿಕೊಂಡಿದ್ದ ಎನ್ನಲಾಗಿದೆ. ಆರೋಪಿ ರಮೇಶ ಪೊಲೀಸ್ ಕಾನ್‌ಸ್ಟೆಬಲ್ ಮಾಳಗಿ ನಿರ್ದೇಶನದ ಮೇರೆಗೆ ಬೈಕ್ ಕಳ್ಳತನ ಮಾಡುತ್ತಿದ್ದ, ಜೊತೆಯಲ್ಲಿ ಇಬ್ಬರು ಅಪ್ರಾಪ್ತ ವಯಸ್ಕ ಬಾಲಕರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿಗಳು ಸೆಕೆಂಡ್ ಹ್ಯಾಂಡ್ ಬೈಕ್‌ಗಳನ್ನು ಮಾರಾಟ ಮಾಡುವ ಪೋರ್ಟಲ್‌ಗಳಿಗೆ ಹೋಗಿ ನೋಂದಣಿ ಸಂಖ್ಯೆಗಳನ್ನು ಸಂಗ್ರಹಿಸಿ ಕಳ್ಳತನ ಮಾಡಿದ ವಾಹನಗಳ ಮೇಲೆ ಆ ನೋಂದಣಿ ಸಂಖ್ಯೆಗಳನ್ನು ಹಾಕಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಬ್ಯಾಂಕ್ ಸಾಲ ಮರುಪಾವತಿ ಮಾಡಬೇಕಾಗಿರುವುದರಿಂದ ವಾಹನಗಳ ದಾಖಲೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಗ್ರಾಹಕರಿಗೆ ಹೇಳುತ್ತಿದ್ದರು.
ನಂದಿನಿ ಲೇಔಟ್, ಯಶವಂತಪುರ, ಎಚ್‌ಎಂಟಿ ಲೇಔಟ್, ಜಾಲಗಳ್ಳಿ ಕ್ರಾಸ್, ಹೆಬ್ಬಾಳ, ಜ್ಞಾನಭಾರತಿ, ಪೀಣ್ಯ, ರಾಜಗೋಪಾಲನಗರ ಮತ್ತಿತರ ಪ್ರದೇಶಗಳಲ್ಲಿ ಮಾಳಗಿ ಸರಣಿ ಬೈಕ್ ಕಳ್ಳತನ ಮಾಡುತ್ತಿದ್ದ ದಂಧೆಯ ಮಾಸ್ಟರ್ ಮೈಂಡ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಶುಕ್ರವಾರ ಮೂರು ಬೈಕ್‌ಗಳನ್ನು ಮಾಲೀಕರಿಗೆ ಹಸ್ತಾಂತರಿಸಿದ್ದಾರೆ. ವಾಹನ ಖರೀದಿಯಲ್ಲಿ ಎಚ್ಚರಿಕೆ ವಹಿಸುವಂತೆ ಡಿಸಿಪಿ ಪಾಟೀಲ್ ಜನರಲ್ಲಿ ಮನವಿ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ನ್ಯಾಯಾಲಯದ ನಿರ್ದೇಶನ ಪಾಲಿಸಲು ನಿರ್ಲಕ್ಷ್ಯ: ರಾಜ್ಯ ಸರ್ಕಾರದ 41 ಇಲಾಖೆಗಳಿಗೆ ಹೈಕೋರ್ಟ್‌ ನೋಟಿಸ್‌

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement