ನೂಡಲ್ಸ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ: 6 ಕಾರ್ಮಿಕರು ಸಾವು

ಪಾಟ್ನಾ: ನೂಡಲ್ಸ್ ತಯಾರಿಕಾ ಕಾರ್ಖಾನೆಯ ಬಾಯ್ಲರ್ ಸ್ಫೋಟಗೊಂಡು 6 ಕಾರ್ಮಿಕರು ಮೃತಪಟ್ಟ ಬಿಹಾರದಲ್ಲಿ ಘಟನೆ ಸಂಭವಿಸಿದೆ.
ಬಿಹಾರದ ಮುಜಾಫರ್‍ಪುರ ಜಿಲ್ಲೆಯ ನೂಡಲ್ಸ್ ತಯಾರಿಕಾ ಕಾರ್ಖಾನೆಯಲ್ಲಿಶನಿವಾರ ರಾತ್ರಿ 10 ಗಂಟೆಗೆ ಸುಮಾರಿಗೆ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಆರು ಕಾರ್ಮಿಕರು ಮೃತಪಟ್ಟಿದ್ದಾರೆ. ಸ್ಫೋಟದ ಸದ್ದು ಸುಮಾರು 5 ಕಿ.ಮೀ ದೂರದ ವರೆಗೆ ಕೇಳಿಸಿದೆ. ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಕಾರ್ಖಾನೆಯ ಅವಶೇಷಗಳ ಅಡಿಯಲ್ಲಿ 10ಕ್ಕೂ ಹೆಚ್ಚು ಜನರು ಸಿಲುಕಿರುವುದಾಗಿ ವರದಿಯಾಗಿದೆ. ಸ್ಫೋಟದ ತೀವ್ರತೆಗೆ ಸಮೀಪದ ಮತ್ತೊಂದು ಘಟಕಕ್ಕೂ ಹಾನಿಯಾಗಿದ್ದು, ಅದರಲ್ಲಿ ಮಲಗಿದ್ದ ಇಬ್ಬರು ಕಾರ್ಮಿಕರಿಗೂ ಗಾಯಗಳಾಗಿವೆ.
ಮುಜಾಫರ್‍ಪುರದ ಪೊಲೀಸ್ ಎಸ್‌ಪಿ ಜಯಂತ್ ಕಾಂತ್ ಘಟನೆಯ ಬಗ್ಗೆ ಮಾತನಾಡಿ, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈವರೆಗೂ ಆರು ಮೃತ ದೇಹಗಳನ್ನು ಹೊರ ತೆಗೆದಿದ್ದೇವೆ. ಐವರು ಕಾರ್ಮಿಕರು ಗಾಯಗೊಂಡಿದ್ದು, ಶ್ರೀ ಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement