ಕರ್ನಾಟಕದಲ್ಲಿ ಸಿಎಂ ಬದಲಾವಣೆ ಇಲ್ಲ, ಬೊಮ್ಮಾಯಿ ಉತ್ತಮ ಆಡಳಿತ ನಡೆಸುತ್ತಿದ್ದಾರೆ: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌

ಹುಬ್ಬಳ್ಳಿ: ಕೊರೋನಾ ನಿಯಮಾವಳಿ ಹಿನ್ನೆಲೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಆಗಮಿಸಬೇಕಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಪ್ರವಾಸ ರದ್ದಾಗಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಹೇಳಿದರು.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜಾರಿಯಲ್ಲಿರುವ ಕೊರೋನಾ ನಿಯಮ ಇರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜಿ.ಪಿ ನಡ್ಡಾ ನೇತೃತ್ವದಲ್ಲಿ ನಡೆಯಬೇಕಾಗಿದ್ದ ಸಭೆ ಮುಂದೂಡಲಾಗಿದೆ. ಮುಂದೆ ಯಾವುದಾದರು ದೊಡ್ಡ ಕಾರ್ಯಕ್ರಮದಲ್ಲಿ ಅವರು ಬರಲಿದ್ದಾರೆ.ಕಾರ್ಯಕಾರಿಣಿ ಸಭೆಯಲ್ಲಿ ೫೦೦ರ ಬದಲಿಗೆ ೩೦೦ ನಾಯಕರು ಮಾತ್ರ ಪಾಲ್ಗೊಳ್ಳಲಿದ್ದಾರೆ. ನಾವು ನಿಯಮದಂತೆ ಕಾರ್ಯಕಾರಿಣಿ ಮಾಡುತ್ತಿದ್ದೇವೆ. ಕಾರ್ಯಕಾರಿಣಿಯಲ್ಲಿ ರಾಜಕೀಯ ಬಗ್ಗೆ ಹಾಗೂ ಪಕ್ಷದ ಮುಂದಿನ ರೂಪು-ರೇಷಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು. ಎಂದು ಮಾಹಿತಿ ನೀಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉತ್ತಮವಾಗಿ, ಬದ್ಧತೆಯಿಂದ ಆಡಳಿತ ನಡೆಸುತ್ತಿದ್ದಾರೆ. ಅವರ ಬಗ್ಗೆ ಇರುವ ಭ್ರಷ್ಟಾಚಾರ ಆರೋಪಗಳೆಲ್ಲ ಸತ್ಯಕ್ಕೆ ದೂರವಾದದ್ದು. ಅವರ ಬದಲಾವಣೆ ಸುದ್ದಿ ಕೇವಲ ಊಹಾಪೋಹ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ವಿರುದ್ಧ ಗುತ್ತಿಗೆದಾರರ ಶೇ. ೪೦ ಕಮಿಷನ್ ಆರೋಪ ಸತ್ಯಕ್ಕೆ ದೂರವಾಗಿದ್ದು, ಸರ್ಕಾರ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಧಿಕಾರಿಗಳು ಅದರಲ್ಲಿ ಭಾಗವಹಿಸಿದ್ದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆ ಬೊಮ್ಮಾಯಿಯವರ ನೇತೃತ್ವದದಲ್ಲಿ ಮಾಡಲಾಗುವುದು. ಆ ಚುನಾವಣೆಯಲ್ಲಿ ಬಿಜೆಪಿ ೧೫೦ ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಗ್ರಾಮ ಪಂಚಾಯತ ಹಾಗೂ ಪಾಲಿಕೆಯಲ್ಲಿ ಮತ್ತು ಪರಿಷತ್‍ನಲ್ಲಿ ನಾವು ಹೆಚ್ಚು ಸ್ಥಾನ ಗೆದ್ದಿದ್ದೇವೆ. ಪರಿಷತ್ ಚುನಾವಣೆಯಲ್ಲಿ ನಡೆದ ಕೆಲ ಲೋಪದ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. ನಾವು ಬೆಳಗಾವಿ ಪರಿಷತ್ ಚುನಾವಣೆ ಗೆಲ್ಲಬೇಕಿತ್ತು. ಆ ಬಗ್ಗೆ ಆಂತರಿಕ ತನಿಖೆ ಮಾಡುತ್ತೇವೆ ಎಂದು ತಿಳಿಸಿದರು.
ಬಸವರಾಜ ಬೊಮ್ಮಾಯಿಯವರು ಕೇಂದ್ರ ಸಚಿವರಾಗುತ್ತಾರೆ ಎಂಬ ನಿರಾಣಿ ಹೇಳಿಕೆಗೆ ಅರುಣ ಸಿಂಗ್ ಪ್ರತಿಕ್ರಿಯಿಸಿ, ಈ ಕುರಿತು ಅವರ ಜೊತೆ ಮಾತನಾಡಲಾಗಿದೆ. ತಮ್ಮ ಹೇಳಿಕೆ ತಿರುಚಲಾಗಿದೆ ಎಂದು ಅವರು ತಿಳಿಸಿದ್ದಾರೆ ಎಂದರು.
ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಿತ್ತಾಟ ನಡೆಯುತ್ತಿದೆ. ಚುನಾವಣೆ ಹತ್ತಿರ ಬಂದಂತೆ ಕಾಂಗ್ರೆಸ್ ಪಕ್ಷದಲ್ಲಿ ಕಿತ್ತಾಟಗಳು ಇನ್ನೂ ಹೆಚ್ಚಾಗುತ್ತವೆ ಎಂದು ಲೇವಡಿ ಮಾಡಿದರು.
ಈ ಹಿಂದೆ ಸಿದ್ದರಾಮಯ್ಯ ಸಿಎಂ ಇದ್ದಾಗ ತುಷ್ಟೀಕರಣ, ಜಾತಿಗಳ ನಡುವೆ ಒಡೆದಾಡುವ ರಾಜಕಾರಣ ಮಾಡಿದ್ದರು. ಇದರಿಂದ ಅವರಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದರೆ ಮತ ಸಿಗುವುದಿಲ್ಲ, ಬದಲಾಗಿ ಇರುವ ಮತಗಳನ್ನೂ ಕಳೆದುಕೊಳ್ಳುತ್ತಾರೆ ಎಂದು ಟೀಕಿಸಿದರು.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement