ಬಿಸಿಯೂಟದಲ್ಲಿ ಹಲ್ಲಿ; 81 ಮಕ್ಕಳು ಅಸ್ವಸ್ಥ, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ

ಹಾವೇರಿ: ಮಧ್ಯಾಹ್ನ ಬಿಸಿಯೂಟ ಸೇವಿಸಿ 81 ಮಕ್ಕಳು ಅಸ್ವಸ್ಥಗೊಂಡ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ವೆಂಕಟಾಪುರ ತಾಂಡಾದ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಹಲ್ಲಿ ಬಿದ್ದಿದ್ದ ಊಟ ಸೇವಿಸಿ ಶಾಲಾ ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗಿದೆ. ವಾಂತಿ ಭೇದಿಯಿಂದ 81 ಮಕ್ಕಳು ಅಸ್ವಸ್ಥಗೊಂಡಿದ್ದು, ಅವರಿಗೆ ರಾಣೆಬೆನ್ನೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಸ್ವಸ್ಥಗೊಂಡ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದ್ದು, ಆಸ್ಪತ್ರೆಗೆ ಡಿಡಿಪಿಐ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.
ಶಾಲಾ‌ ಬಾಲಕನೊಬ್ಬನ ತಟ್ಟೆಗೆ ಬಡಿಸಿದ ಊಟದಲ್ಲಿ ಹಲ್ಲಿ ಕಾಣಿಸಿಕೊಂಡಿತ್ತು. ಬಳಿಕ, ಬಾಲಕನಿಗೆ ವಾಂತಿ ಕಾಣಿಸಿಕೊಂಡಿತ್ತು. ಒಬ್ಬ ಬಾಲಕನಿಗೆ ವಾಂತಿ ಆಗುತ್ತಿದ್ದಂತೆ ಗಾಬರಿಗೊಂಡು ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ. ತಲೆನೋವು, ಹೊಟ್ಟೆನೋವಿನಿಂದ ಐದು ಮಕ್ಕಳು ಬಳಲುತ್ತಿದ್ದು, ಉಳಿದ ಎಪ್ಪತ್ತಾರು ಮಕ್ಕಳ ಆರೋಗ್ಯ ಸುಧಾರಿಸಿದೆ ಎಂದು ತಿಳಿದುಬಂದಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement