ಮತದಾನ ಮಾಡಿ ಬರುತ್ತಿದ್ದ ಮಹಿಳೆಯ ಕಾರು ಅಡ್ಡಗಟ್ಟಿ ಬರ್ಬರವಾಗಿ ಕೊಲೆ ಮಾಡಿದ ದುಷ್ಕರ್ಮಿಗಳು

ಬೆಂಗಳೂರು: ಕಾರು ಅಡ್ಡಗಟ್ಟಿ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಸೋಮವಾರ ರಾತ್ರಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅರ್ಚನಾ ರೆಡ್ಡಿ (40)ಕೊಲೆಯಾಗಿರುವ ಗೃಹಿಣಿ ಎಂದು ಗುರುತಿಸಲಾಗಿದೆ. ಮೂಲತಃ ಜಿಗಣಿ ನಿವಾಸಿಯಾಗಿರುವ ಅವರು, ಇತ್ತೀಚೆಗೆ ಬೆಳ್ಳಂದೂರಿನಲ್ಲಿ ವಾಸವಾಗಿದ್ದರು. ನಿನ್ನೆ ಜಿಗಣಿ ಪುರಸಭೆಗೆ ನಡೆದ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಚನಾ ರೆಡ್ಡಿ ಬರುತ್ತಾರೆ ಎಂದು ತಿಳಿದಿದ್ದ ಆರೋಪಿಗಳು ಅವರನ್ನು ಕೊಲೆ ಮಾಡಲು ಯೋಜನೆ ರೂಪಿಸಿ ಕಾಯುತ್ತ ಕುಳಿತಿದ್ದರು. ಮತದಾನ ಮುಗಿಸಿ ರಾತ್ರಿ ಮಗ ಹಾಗೂ ಚಾಲಕನ ಜೊತೆ ಕಾರಿನಲ್ಲಿ ಅರ್ಚನಾ ರೆಡ್ಡಿ ಮನೆಗೆ ವಾಪಸಾಗುತ್ತಿದ್ದರು. ಕಾರು ಹೊಸರೋಡ್ ಸಿಗ್ನಲ್ ಬಳಿ ಬರುತ್ತಿದ್ದಂತೆ ಹೊಂಚು ಹಾಕಿ ಕುಳಿತಿದ್ದ ಆರೋಪಿಗಳು ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಅರ್ಚನಾ ರೆಡ್ಡಿಗೆ ಮಾರಕಾಸ್ತ್ರದಿಂದ ಭೀಕರವಾಗಿ ಹಲ್ಲೆ ಮಾಡಿ ಪರಾರಿ ಯಾಗಿದ್ದಾರೆ.
ದಾಳಿ ಸಂದರ್ಭದಲ್ಲಿ ಅರ್ಚನಾ ರೆಡ್ಡಿ ಅವರ ಮಗ ಹಾಗೂ ಚಾಲಕ ಕಾರಿನಿಂದ ಇಳಿದು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಅರ್ಚನಾ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಅವರು ಮೃತಪಟ್ಟಿದ್ದಾರೆ.
ಆಸ್ತಿ ವಿಚಾರವಾಗಿ ಈ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆಸ್ತಿ ವಿಚಾರವಾಗಿ ಈ ಹಿಂದೆ ಗಲಾಟೆ ನಡೆದಿತ್ತು. ಈ ಬಗ್ಗೆ ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಮುಖ ಸುದ್ದಿ :-   ಸಂಸದ ಪ್ರಜ್ವಲ್ ರೇವಣ್ಣಗೆ ಎಸ್‍ಐಟಿ ಲುಕೌಟ್ ನೋಟಿಸ್ ಜಾರಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement