ಮೆಹಂದಿ ಕಾರ್ಯಕ್ರಮ ನಡೆಯುತ್ತಿದ್ದ ಮನೆಗೆ ನುಗ್ಗಿಲಾಠಿ ಪ್ರಹಾರ, ಮದುಮಗ-ಮಹಿಳೆಯರಿಗೂ ಗಾಯ: ಪೊಲೀಸರು ವಿರುದ್ಧ ಆರೋಪ

ಕುಂದಾಪುರ: ಉಡುಪಿ ಜಿಲ್ಲೆಯ ಕೋಟತಟ್ಟು ಗ್ರಾಮದ ಕೊರಗ ಕಾಲೋನಿಯಲ್ಲಿ ಮೆಹಂದಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆಯಲ್ಲಿ ಏಕಾಏಕಿ ನುಗ್ಗಿದ ಪೊಲೀಸರು ಡಿಜೆ ಹಾಗೂ ಲೈಟ್‌ ಆಫ್‌ ಮಾಡಿ, ಮದುಮಗ ಸೇರಿದಂತೆ ಸಿಕ್ಕ ಸಿಕ್ಕವರ ಮೇಲೆ ಲಾಠಿ ಚಾರ್ಜ್‌ ಮಾಡಿದ್ದಾರೆ ಎಂಬ ಆರೋಪ‌ ಕೇಳಿಬಂದಿದೆ.
ಪೊಲೀಸರ ಅಮಾನವೀಯ ವರ್ತನೆಯ ವಿರುದ್ದ ಕೆರಳಿರುವ ಸ್ಥಳೀಯ ಮುಖಂಡರು ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತಪ್ಪಿತಸ್ಥರ ಪೊಲೀಸರ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಬಾರಿಕೆರೆಯಲ್ಲಿ ಮೆಹಂದಿ ಕಾರ್ಯಕ್ರಮ ನಡೆಯುತ್ತಿದ್ದ ಮನೆಗೆ ಪೊಲೀಸರು ದಾಳಿ ನಡೆಸಿ ಲಾಠಿ ಚಾರ್ಜ್ ನಡೆಸಿ ದೌರ್ಜನ್ಯ ಎಸಗಿದ್ದಾರೆ
ಇದು ಕೋಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಾರಿಕೆರೆ ನಿವಾಸಿ ರಾಜೇಶ್ ಎನ್ನುವಾತನಿಗೆ ಕುಮಟಾದ ಯುವತಿಯೊಂದಿಗೆ ಗುರುವಾರ ಮದುವೆ ನಡೆಯಬೇಕಿದ್ದು ಈ ಪ್ರಯುಕ್ತ ವರನ ಮನೆಯಲ್ಲಿ ಸೋಮವಾರ ಮೆಹಂದಿ ಕಾರ್ಯಕ್ರಮ ನಡೆಯುತ್ತಿತ್ತು.
ಈ ಸಂದರ್ಭ ಡಿಜೆ ಶಬ್ದದಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ ಎಂದು ಸ್ಥಳೀಯರೋರ್ವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಏಕಾಏಕಿ ಮದುವೆ ಮನೆಗೆ ನುಗ್ಗಿದ ಪೊಲೀಸರು ಮಹಿಳೆಯರು, ಮಕ್ಕಳು ಹಾಗೂ ವರನ ಸಹಿತ ಎಲ್ಲರ ಮೇಲೂ ಲಾಠಿ ಚಾರ್ಜ್ ನಡೆಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಮೆಹಂದಿ ಮನೆಯಿಂದ ವರ ರಾಜೇಶ್ ಹಾಗೂ ಎಸ್ ಟಿ ಸಮುದಾಯದ ಮುಖಂಡ ಸಹಿತ ಐವರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಹಾಗೂ ಎಸ್ ಟಿ ಸಮುದಾಯದವರು ರಾತ್ರೋರಾತ್ರಿ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು‌. ಅನಂತರ ಐವರನ್ನು ಬಿಡುಗಡೆಗೊಳಿಸಲಾಯಿತು.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಹಾಗೂ ಬ್ರಹ್ಮಾವರ ಸರ್ಕಲ್ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಅತ್ಯಂತ ಅಮಾನವೀಯ ಮತ್ತು ಹೇಯವಾದದ್ದು. ಆದ್ದರಿಂದ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಈ ವೇಳೆ ಎಸ್ ಟಿ ಸಮುದಾಯದ ಮುಖಂಡರು, ಸ್ಥಳೀಯರು ಆಗ್ರಹಿಸಿದ್ದಾರೆ.
ಕೋಟತಟ್ಟು ಕೊರಗ ಸಮುದಾಯದವರ ಮನೆಯಲ್ಲಿ ನಡೆದ ಮೆಹಂದಿ ಕಾರ್ಯಕ್ರಮಕ್ಕೆ ಏಕಾಏಕಿ ನುಗ್ಗಿ ಹೆಣ್ಣು ಮಕ್ಕಳಿಗೆ , ಮಧುಮಗನನ್ನು ಲೆಕ್ಕಿಸದೇ ಲಾಠಿ ಬಿಸಿ, ಬೇದರಿಸಿ ಅವಾಚ್ಯ ಶಬ್ದಗಳಿಂದ ಬೈದ ಕೋಟ ಪೊಲೀಸ್ ಠಾಣಾಧಿಕಾರಿ ಸಂತೋಷ್‌ ಮತ್ತು ಅವರೊಂದಿಗೆ ಲಾಠಿ ಚಾರ್ಜ್ ಮಾಡಿದ ಕೋಟ ಠಾಣಾ ಸಿಬ್ಬಂದಿಯನ್ನು ಅಮಾನತು ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಆಗ್ರಹಿಸಿದ್ದಾರೆ.
ಈ ಕೂಡಲೇ ಅಮಾನತು ಮಾಡದಿದ್ದರೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಲಾಗುವುದೆಂದು ಎಚ್ಚರಿಸಿದ್ದಾರೆ.

ಪ್ರಮುಖ ಸುದ್ದಿ :-   ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದ್ದಕ್ಕೆ ವಿರೋಧ : ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ ಪಕ್ಷದ ರಾಷ್ಟ್ರೀಯ ವಕ್ತಾರೆ ರಾಧಿಕಾ ಖೇರಾ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement